ಅಂಕೋಲಾ : ಈಗ ಎಲ್ಲೆಡೆ ಕೋವಿಡ್ ಮಹಾ ಮಾರಿಯಂತೆ ಹಬ್ಬುತ್ತಿದ್ದು, ಇತರರಿಗೆ ಮಾದರಿಯಾಗಬೇಕಾದ ಉಪನ್ಯಾಸಕರೇ ಕೋವಿಡ್ ಪಾಸಿಟಿವ್ ಇದ್ದರೂ ಮುಚ್ಚಿಟ್ಟು ಕಾಲೇಜಿನಲ್ಲಿ ಪಾಠ ಮಾಡಿದ ಪ್ರಾಧ್ಯಾಪಕನಿಂದಾಗಿ 13 ಜನ ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಡೆದಿದೆ.
ಇಲ್ಲಿನ ಪ್ರತಿಷ್ಠಿತ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನದ ಹಿಂದೆ ಖಾಸಗಿ ಕಾರ್ಯಕ್ರಮಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಪ್ರಾಧ್ಯಾಪಕನಿಗೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು. ಪಾಸಿಟಿವ್ ಬಂದಿದ್ದರಿಂದ ಹೋಮ್ ಐಸೋಲೇಷನ್ ಗೆ ಸೂಚಿಸಲಾಗಿತ್ತು. ಆದರೇ ರಜೆ ಹಾಕಿದರೆ ಗಳಿಕೆ ರಜೆ ವ್ಯರ್ಥವಾಗುತ್ತದೆ ಎನ್ನುವ ಕಾರಣದಿಂದ ರಜೆ ಹಾಕದೇ ಉಪನ್ಯಾಸಕ ಕಾಲೇಜಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ ಎನ್ನಲಾಗಿದೆ.
ಇದರಿಂದ 13 ಜನ ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ. ಸದ್ಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದ 320 ವಿದ್ಯಾರ್ಥಿಗಳನ್ನು
ಆರೋಗ್ಯ ಇಲಾಖೆ ಇಂದು ಕೊವಿಡ್ ತಪಾಸಣೆ ನಡೆಸಿದೆ.
ಕೆಲವು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ವರದಿ ಬರುತಿದ್ದಂತೆ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು ಇದರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಗೈರಾಗಿದ್ದಾರೆ ಎಂದು ವರದಿಯಾಗಿದೆ.