ಅಂಕೋಲಾ: ಅಪಘಾತ ಸಂಭವಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬ ಇಂದು ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಪಟ್ಟಣದ ಹುಲಿದೇವರವಾಡದ ಪೆಟ್ರೋಲ್ ಪಂಪ್ ಎದುರಿನ ರಾ ಹೆ 66 ರಲ್ಲಿ ಇತ್ತೀಚೆಗೆ ಸಂಭವಿಸಿದ್ದ ಕಾರು ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಈತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೇರಳ ವರ್ಕಾಡಿ ಪಾವೂರು ನಿವಾಸಿ ಮಹಮ್ಮದ್ ಇಸಾಕ್ ಶಾನು ಗುರುವಾರ ಮುಂಜಾನೆ ಮೃತ ಪಟ್ಟಿದ್ದಾನೆ. ಈತ ಕೇರಳದ ಸಿಪಿಎಂ ಮುಖಂಡ ಕುಂಮೋನು ಬೋಳಿಯಾರ್ ಅವರ ಪುತ್ರ ಎಂದು ತಿಳಿದು ಬಂದಿದೆ.
ಜನೆವರಿ 12 ರಂದು ಬುಧವಾರ ನಸುಕಿನ ಜಾವ ಅಂಕೋಲಾ ತಾಲೂಕಿನ ಹುಲಿದೇವರವಾಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದಿಂದ ಗೋವಾಕ್ಕೆ ತೆರಳುತ್ತಿದ್ದ ಕಾರು,ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಕಾಸರಗೋಡ ಜಿಲ್ಲೆಯ ಮಂಜೇಶ್ವರ ನಿವಾಸಿ ಅಬುಬಕರ್ ಅನ್ಸಾರ್ ಅಬ್ದುಲ್ ರೆಹಮಾನ್(32) ಸ್ಥಳದಲ್ಲಿಯೇ ಮೃತ ಪಟ್ಟಿದ್ದರು.ಗಾಯಗೊಂಡಿದ್ದ ಕಾರು ಚಾಲಕ ಮಹಮ್ಮದ್ ಶರೀಫ್(42) ಗೋವಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು.
ಇದೀಗ ಇನ್ನೊರ್ವ ಗಾಯಾಳು ಸಹ ಮೃತ ಪಟ್ಟಿರುವುದರಿಂದ ಈ ಭೀಕರ ಅಪಘಾತಕ್ಕೆ ಮೂವರೂ ದುರ್ಮರಣ ಹೊಂದಿದಂತಾಗಿದೆ.