IMG 20170821 WA0002ಎನ್ ಮುರಳೀಧರ್
ವಕೀಲರು
ನೆಲಮಂಗಲ
9902772278

ಇದು ಯಾವ ರೀತಿಯ ಪ್ರಶ್ನೆ? ಯಾರಾದರೂ ತಾವಾಗಿಯೇ ಬೆಂಕಿಯಲ್ಲಿ ಬೀಳುತ್ತಾರೆಯೇ? ಎನ್ನಬಹುದು. ಮನುಷ್ಯ ಬುದ್ದಿವಂತ ಜೀವಿ ತಾನಾಗಿಯೇ ಬೆಂಕಿಯಲ್ಲಿ ಬೀಳಲು ಹೋಗುವುದಿಲ್ಲ. ದೀಪದ ಹುಳುವಿನಂತೆ, ಚಿಟ್ಟೆಯಂತೆ ಯಾರೂ ಬೆಂಕಿಗೆ ಹೋಗಿ ಬೀಳುವುದಿಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಪರಿಸ್ಥಿತಿಯ ಒತ್ತಡದಿಂದ ಮನುಷ್ಯನು ಒಮ್ಮೊಮ್ಮೆ ತಾನಾಗಿಯೇ ಬೆಂಕಿಯಲ್ಲಿ ಬೀಳುವಂಥಹ ಪರಿಸ್ಥಿತಿ ಬಂದು ಬಿಡುತ್ತದೆ.

ಇಲ್ಲಿ ಬೆಂಕಿ ಎಂದರೆ ಅಪರಾಧ ಎಂಬ ಅರ್ಥದಲ್ಲಿ ಹೇಳಲಾಗಿದೆ. ಅಂದರೆ ಮನುಷ್ಯ ತಾನಾಗಿಯೇ ಸ್ವಯಂಕೃತ ಅಪರಾಧವನ್ನು ಮಾಡಬಾರದು ಎಂದರೆ ಮನುಷ್ಯ ತಾನಾಗಿಯೇ ಬೆಂಕಿಯಲ್ಲಿ ಬೀಳಬಾರದು ಎಂಬ ಅರ್ಥ. ಮಾಡುತ್ತಿರುವ ಕಾರ್ಯವು ಕೆಟ್ಟದ್ದು ಇದರಿಂದ ತನಗೇ ಕೆಡಕಾಗುತ್ತದೆ ಎಂದು ತಿಳಿದಿದ್ದೂ ಸಹ ಅದನ್ನೇ ಮಾಡಲು ಹೋದರೆ ಮನುಷ್ಯನು ತಾನಾಗಿಯೇ ಬೆಂಕಿಯಲ್ಲಿ ಬಿದ್ದಂತೆ ಆಗುತ್ತದೆ. ಮನುಷ್ಯ ಬೆಂಕಿಯಲ್ಲಿ ಬಿದ್ದರೆ ತಾನು ಮಾತ್ರ ಸುಡುತ್ತಾನೆ. ಆದರೆ ಅಪರಾಧವೆಂಬ ಬೆಂಕಿಯು ತನ್ನನ್ನು ಮಾತ್ರ ಸುಡದೆ ಕುಟುಂಬದ ಎಲ್ಲರನ್ನೂ ಸುಡಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಒಬ್ಬನ ಸ್ವಯಂಕೃತ ಅಪರಾಧ ತನ್ನ ಇಡೀ ಕುಟುಂಬವನ್ನೇ ಬಲಿ ಪಡೆಯಬಹುದು. ಇದರಿಂದ ಕುಟುಂಬದ ಗೌರವ ನಾಶವಾಗಬಹುದು. ಸಮಾಜದಲ್ಲಿ ಯಾರೂ ನಂಬದಂತೆ ಆಗಬಹುದು.

 
ಮನುಷ್ಯನು ಸ್ವಲ್ಪ ದುರ್ಬಲನಾಗಿದ್ದರೆ, ಬಡವನಾಗಿದ್ದರೆ ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಅವನಿಗೆ ಹಣದ ಆಮಿಷ ತೋರಿಸಿ ಅಪರಾಧ ಕೃತ್ಯವನ್ನು ಮಾಡಿಸಲೂಬಹುದು. ಇದರಲ್ಲಿ ತನ್ನ ತಪ್ಪು ಇರದಿದ್ದರೂ ಮಾಡಿದ ಕಾರ್ಯ ಮನುಷ್ಯನನ್ನು ಅಪರಾಧಿಯನ್ನಾಗಿ ಮಾಡುತ್ತದೆ. ಬೇರೆಯವರ ಪ್ರಲೋಭನೆಗೆ ಒಳಗಾಗಿ ಅಪರಾಧ ಮಾಡಿದ್ದರೆ ತಕ್ಷಣ ಎಚ್ಚೆತ್ತುಕೊಂಡು ಸರಿಯಾದ ದಾರಿಗೆ ಬಂದರೆ ಒಳ್ಳೆಯದು. ಕೆಲವೊಮ್ಮೆ ಕೆಟ್ಟದ್ದರಲ್ಲೂ ಸುಖ ಇದೆ ಇದರಿಂದ ಹೇರಳವಾಗಿ ಹಣ ಬರುತ್ತದೆ ಇನ್ಯಾಕೆ ಕಷ್ಟವನ್ನು ಪಡಬೇಕು ಎಂದು ಸುಖದಲ್ಲಿ ಮೈಮರೆತು ಮುಂದುವರೆಸಿದರೆ ಜೀವನ ಪೂರ್ತಿ ತಾನೂ ನೊಂದು ತನ್ನ ಕುಟುಂಬದವರೂ ನೋವಿನಿಂದ ಬಳಲಿದಂತೆ ಆಗುತ್ತದೆ. ಕ್ಷಣಿಕ ಸುಖಕ್ಕಾಗಿ ಹಂಬಲಿಸಿ ಮುನ್ನಡೆದರೆ ಜೀವನ ಪರ್ಯಂತ ಕಷ್ಟ ಪಡಬೇಕಾಗಬಹುದು.
ಒಳ್ಳೆಯ ರೀತಿಯಲ್ಲಿ ಹಣ ಸಂಪಾದನೆ ಮಾಡುವುದು ಬಹಳ ಕಷ್ಟ. ಅದೂ ಅಲ್ಲದೆ ಅಲ್ಪಾದಾಯ ಬರಬಹುದು ಆದರೆ ಇದರಲ್ಲಿ ಸುಖ ಸಂತೋಷ ನೆಮ್ಮದಿ ಇರುತ್ತದೆ. ಮನುಷ್ಯ ದಿಡೀರನೆ ಸಾಹುಕಾರ ನಾಗಬೇಕೆಂಬ ದುರಾಲೋಚನೆಯಿಂದ ಅಡ್ಡದಾರಿ ಹಿಡಿದು ಹಣವನ್ನು ಸಂಪಾದನೆ ಮಾಡಲು ಹೋದರೆ ಇರುವ ನೆಮ್ಮದಿಯೂ ಹಾಳಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಅಪಾಯವು ಎದರಾಗಬಹುದು.

RELATED ARTICLES  ಆ.6 ಭಾನುವಾರ ಬೆಳಿಗ್ಗೆ 9.30 ರಿಂದ ಸಾಯಂಕಾಲ 5.30 ರವರೆಗೆ ಬೃಹತ್ ಉದ್ಯೋಗ ಮೇಳ.

 
ಈಗಿನ ಕಾಲದಲ್ಲಿ ಮನುಷ್ಯನಾದವನು ಕಾಲಕ್ಕೆ ತಕ್ಕಂತೆ ಓದಿ ಬುದ್ದಿವಂತನಾಗಿರುವುದರಿಂದ ಅಷ್ಟಾಗಿ ತಪ್ಪು ಮಾಡುವುದಿಲ್ಲ ಎನ್ನಬಹುದು. ಪರಿಸ್ಥಿತಿಯ ಶಿಶುವಾಗಿ ಅಸಹಾಯಕನಾಗಿಯೂ ಎಡವಬಹುದು. ಆದಷ್ಟೂ ಯೋಚಿಸಿ ಕಾರ್ಯ ಮಾಡಿದರೆ ಒಳಿತಲ್ಲವೇ? ಅಂದರೆ ಸ್ವಯಂ ಕೃತ ಅಪರಾಧ ವಾಗಬಾರದು.
ಈಗಿನ ಕಾಲ ಬಹಳಷ್ಟು ಮುಂದುವರೆದಿದೆ, ಮಾಹಿತಿ ತಂತ್ರಜ್ಞಾನದಲ್ಲಿಯೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಪಂಚವು ಬಹಳವಾಗಿ ಮುಂದುವರೆಯುತ್ತಾ ಸಾಗಿದೆ. ಮನುಷ್ಯನಾದವನು ಕಾಲಕ್ಕೆ ತಕ್ಕಂತೆ ತನ್ನ ಜೀವನೋಪಾಯಕ್ಕೆ ತಕ್ಕಂತಹ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುವುದು ಬುದ್ದಿವಂತರ ಲಕ್ಷಣ. ಈ ಮಾಹಿತಿ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಅಪರಾಧ ಮಾಡಿದರೆ ಬುದ್ದಿವಂತನಾಗಿದ್ದರೂ ಮೂರ್ಖನಾದಂತೆ ಆಗುತ್ತದೆ.
ಸಾಮಾನ್ಯವಾಗಿ ಅಪರಾಧ ಮಾಡುವುದು ದ್ವೇಷ ಮತ್ತು ಹಣಕ್ಕಾಗಿ ಇದನ್ನು ಬಿಟ್ಟು ಬೇರೆ ಕಾರಣಗಳು ಅಷ್ಟಾಗಿ ಕಂಡುಬರುವುದಿಲ್ಲ. ಒಬ್ಬನನ್ನು ಕಂಡರೆ ಆಗದೆ ಇದ್ದರೆ ಅವನಿಗೆ ತೊಂದರೆ ಉಂಟು ಮಾಡಿ ತಾನೂ ತೊಂದರೆ ಅನುಭವಿಸುವುದುಂಟು ಅಥವಾ ಹಣ ಸಂಪಾದನೆ ಮಾಡಲು ಅಪರಾಧವನ್ನು ಮಾಡಬಹುದು. ಅಪರಾಧ ಮಾಡಿ ಸಂಪಾದಿಸಿದ ಹಣ ಅದು ಮುಗಿಯುವವರೆಗೆ ಮಾತ್ರ ಪುನಃ ಅಪರಾಧ ಮಾಡಲು ಪ್ರೇರೇಪಿಸುವುದಿಲ್ಲ. ಹಣ ಮುಗಿದ ನಂತರ ನಾಳೆಯ ಜೀವನೋಪಾಯಕ್ಕೆ ಹಣ ಬೇಕಿರುವುದರಿಂದ ಹಳೆಯ ಚಾಳನ್ನು ಮುಂದುವರೆಸಲು ಮನಸ್ಸು ಪ್ರೇರೇಪಿಸುತ್ತದೆ. ಸುಲಭವಾಗಿ ಹಣ ಬಂದರೆ ಕಷ್ಟ ಪಡುವ ಗೋಜಿಗೆ ಯಾಕೆ ಹೋಗಬೇಕು ಎಂದು ಅದನ್ನೇ ಮುಂದುವರೆಸಿಕೊಂಡು ಹೋಗುವಂತೆ ಮನಸ್ಸಾಗುತ್ತದೆ.
ಇದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಇರುವುದಿಲ್ಲ. ಇದನ್ನು ಮರೆಯಲು ನಾನಾ ತರಹ ದುಶ್ಚಟಗಳಿಗೆ ಬಲಿಯಾಗುವ ಸಂಭವವೂ ಬಹಳವಾಗಿ ಇರುತ್ತದೆ. ಕೆಟ್ಟ ಚಟಕ್ಕೆ ದಾಸನಾಗಿ ಜೀವನ ನಿರ್ವಹಣೆ ಜೊತೆಗೆ ತನ್ನ ದುಶ್ಚಟಕ್ಕೆ ಹಣವನ್ನು ಹೊಂದಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ತಾನೇ ನಿರ್ಮಾಣ ಮಾಡಿಕೊಂಡಂತೆ ಆಗುತ್ತದೆ. ದುಡಿಯಲು ಮನಸ್ಸಿಲ್ಲ ತಕ್ಷಣ ಯಾರೂ ಕೆಲಸ ನೀಡುವುದಿಲ್ಲ. ಉಪವಾಸ ಇರಲು ಹೊಟ್ಟೆ ಕೇಳುವುದಿಲ್ಲ. ಇದೆಲ್ಲದರ ಫಲಿತಾಂಶವೇ ಮನುಷ್ಯ ನನ್ನು ಪುನಃ ಪುನಃ ಅಪರಾಧ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತದೆ.
ಬೆಂಕಿ ಒಂದು ಸಲ ಸುಡುತ್ತದೆ. ತಕ್ಷಣ ಎಚ್ಚೆತ್ತುಕೊಂಡರೆ ಅದರಿಂದಾಗುವ ಅಪಾಯವನ್ನು ನಿಯಂತ್ರಿಸಬಹುದು. ಅದೇ ರೀತಿ ಅಪರಾಧದಿಂದಲೂ ಮಾನಸಿಕ ನೆಮ್ಮದಿ ಹಾಳಾಗಿ ಯಾವಾಗಲೂ ಭಯದಿಂದ ಜೀವಿಸುಂವಂತ ಪರಿಸ್ಥಿತಿಯು ನಿಮಾಣವಾಗುತ್ತದೆ. ಇದರಲ್ಲೂ ಸಹ ತಕ್ಷಣ ಎಚ್ಚೆತ್ತುಕೊಂಡರೆ ಮುಂದಿನ ಅಪಾಯವನ್ನು ತಡೆಗಟ್ಟಬಹುದು.
ಬೇರೆಯವರ ಗುಡಿಸಲಿಗೆ ಬೆಂಕಿ ಹಚ್ಚಿ ತಾನು ಶಾಖ ಕಾಯಿಸಿಕೊಳ್ಳುಂತೆ ಖಂಡಿತಾ ಆಗಬಾರದು. ಅಂದರೆ ಬೇರೆಯವರಿಂದ ಅಪರಾಧ ಕೃತ್ಯಗಳನ್ನು ಮಾಡಿಸಿ ತಾನು ಅದರಿಂದ ಜೀವನ ನಡೆಸುವಂತಾಗ ಬಾರದು. ಬೇರೆಯವರನ್ನು ಉರಿಯುತ್ತಿರುವ ಬೆಂಕಿಗೆ ತಳ್ಳಿ ಅದರಿಂದ ಖುಷಿ ಪಡುವಂತಾಗಬಾರದು ಎಂದರೆ ಬೇರೆಯವರನ್ನು ಅಪರಾಧ ಕೃತ್ಯಗಳಿಗೆ ಪ್ರೇರೇಪಿಸಿ ಅವರಿಂದ ಅಪರಾಧ ಕೃತ್ಯಗಳನ್ನು ಮಾಡಿಸಿ ತಾನು ಅದರಿಂದ ಜೀವನ ನಡೆಸುವಂತೆ ಆಗಬಾರದು. ಪಕ್ಕದ ಮನೆಗೆ ಹೊತ್ತಿಕೊಂಡ ಬೆಂಕಿ ತನ್ನ ಮನೆಯನ್ನು ಸುಡುವಂತೆ ಬೇರೆಯವರಿಂದ ಮಾಡಿಸಿದ ಅಪರಾಧ ಒಂದಲ್ಲ ಒಂದು ದಿನ ತನ್ನನ್ನೇ ಸುತ್ತಿಕೊಳ್ಳುತ್ತದೆ ಎಂಬ ಅರಿವು ಇರಬೇಕು.
ಬೂದಿ ಮುಚ್ಚಿದ ಕೆಂಡವು ಮೇಲ್ನೋಟಕ್ಕೆ ಬೂದಿಯಂತೆ ಕಂಡರೂ, ಇದರಲ್ಲಿ ಕೆಂಡ ಇಲ್ಲ ಎಂದು ಕೈಯನ್ನು ಇಟ್ಟರೆ ತಕ್ಷಣ ಸುಡುವಂತೆ, ಅಪರಾಧಿಯಾದವನು ಮೇಲ್ನೋಟಕ್ಕೆ ಒಳ್ಳೆಯವನಾಗಿಯೇ ಇರುತ್ತಾನೆ. ಆದರೆ ಬೂದಿ ಎಂಬ ಮುಖವಾಡವನ್ನು ಕಳಚಿದಾಗಲೇ ನಿಜಸ್ವರೂಪ ಗೊತ್ತಾಗುತ್ತದೆ. ಒಂದು ಸಣ್ಣ ಬೆಂಕಿಯು ಗಾಳಿಯೊಂದಿಗೆ ಬೆರೆತು ದೊಡ್ಡದಾಗಿ ಬರು ಬರುತ್ತಾ ಬೃಹದಾಕಾರವಾಗಿ ಬೆಂಕಿಯ ಜ್ವಾಲೆಯನ್ನು ಉಗುಳುತ್ತಾ ಇಡೀ ಪ್ರದೇಶವೇ ಬೆಂಕಿಗೆ ಆಹುತಿಯಾಗುವಂತೆ, ಒಂದು ಸಣ್ಣ ಅಪರಾಧವು ದಿನೇ ದಿನೇ ದೊಡ್ಡ ಅಪರಾಧವಾಗಿ ಮೊದಲು ತನ್ನನ್ನು ನಂತರ ತನ್ನ ಕುಟುಂಬವನ್ನು ಕಡೆಯದಾಗಿ ಸಮಾಜವನ್ನೇ ಬಲಿ ತೆಗೆದುಕೊಳ್ಳಬಹುದು.
ಆದ್ದರಿಂದ ಮನುಷ್ಯನಾದವನು ಸನ್ಮಾರ್ಗದಲ್ಲಿ ನಡೆಯುತ್ತಾ, ಯಾವ ಅಪರಾಧವನ್ನು ಮಾಡದೆ ಆದಷ್ಟೂ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗಿ, ತನ್ನ ಮಕ್ಕಳನ್ನು ಅದೇ ರೀತಿಯಲ್ಲಿ ಒಳ್ಳೆಯ ಪ್ರಜೆಯನ್ನಾಗಿ ಬೆಳೆಸಿದ್ದಲ್ಲಿ ಅದೇ ಸಮಾಜಕ್ಕೆ ನೀಡುವ ಕೊಡುಗೆಯಾಗುತ್ತದೆ.
ಅಪರಾಧ ಎಂಬ ಬೆಂಕಿಯಲ್ಲಿ ತಾವಾಗಿಯೇ ಬೀಳಬಾರದು ಅದು ನಿಜ. ಆದರೆ ಭಕ್ತಿ ಎಂಬ ಬೆಂಕಿಯಲ್ಲಿ ತಾನಾಗಿಯೇ ಬಿದ್ದು, ಅದರಲ್ಲಿಯೇ ಬೆಂದು ದೇವರ ಸ್ಮರಣೆ ಮಾಡುತ್ತಾ ಹೋದರೆ, ದೈವ ಸಾನಿಧ್ಯವನ್ನು ಪಡೆಯುವಂತಾಗುತ್ತದೆ.

RELATED ARTICLES  ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ: ಸರಕಾರದ ಮಾನ್ಯತೆ ಪಡೆದ ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ.