ಭಟ್ಕಳ : ತಾಲೂಕಿನ ಮುರುಡೇಶ್ವರ ಕಿಸಗಾರ ಮಕ್ಕಿಯ ಮನೆಯೊಂದರ ತೋಟದಲ್ಲಿದ್ದ ನಾಗರ ಕಟ್ಟೆಯ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ಕಲ್ಲಿನಿಂದ ಒಡೆದು ತುಂಡರಿಸಿ ಭಿನ್ನ ಗೊಳಿಸಿದ ಘಟನೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಪೋಲೀಸರು ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಮುರುಡೇಶ್ವರದ ಮಾವಳ್ಳಿ-1 ಗ್ರಾಮದ ಕಿಸಗಾರಮಕ್ಕಿ ನ್ಯಾಷನಲ್ ಕಾಲೋನಿ ಸರ್ವೇ ನಂ: 640 ರಲ್ಲಿ ನರಸಿಂಹ ಬೈರಾ ನಾಯ್ಕ ಎಂಬುವವರ ಮನೆಯ ಹಿಂಬದಿಯಲ್ಲಿನ ನಾಗರಕಟ್ಟೆಯಲ್ಲಿ ಪ್ರತಿ ನಿತ್ಯ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಲಿದ್ದಾರೆ.
ಶನಿವಾರದಿಂದ ಭಾನುವಾರದ ಅವಧಿಯಲ್ಲಿ ಯಾರೋ ಕಿಡಿಗೇಡಿಗಳು ಕುಟುಂಬದವರ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ನಾಗರಕಟ್ಟೆಯಲ್ಲಿನ ನಾಗರ ಮೂರ್ತಿಯನ್ನು ಎರಡು ಭಾಗವಾಗಿ ತುಂಡರಿಸಿರುವುದನ್ನು ಭಾನುವಾರದಂದು ಬೆಳಿಗ್ಗೆ ಪೂಜೆಗೆ ತೆರಳಿದ ವೇಳೆ ಕುಟುಂಬಸ್ಥರ ಗಮನಕ್ಕೆ ಬಂದಿದೆ.
ಘಟನೆಯ ಕುರಿತು ಮುರುಡೇಶ್ವರ ಪೋಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ, ಮುರುಡೇಶ್ವರ ಠಾಣಾ ಪಿಎಸ್ಐ ರವೀಂದ್ರ ಬಿರಾದಾರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ನರಸಿಂಹ ಬೈರಾ ನಾಯ್ಕ ಠಾಣೆಗೆ ದೂರು ಸಲ್ಲಿಸಿದ್ದು, ಪಿಎಸ್ಐ ರವೀಂದ್ರ ಬಿರಾದಾರ ತನಿಖೆ ಮುಂದುವರೆದಿದ್ದಾರೆ.