ಹೊನ್ನಾವರ : ಸಂತಾನ ಅಭಿವೃದ್ಧಿಗಾಗಿ ಮೊಟ್ಟೆ ಇಡಲು ಬಂದಿದ್ದ ರಿಡ್ಲೆ ಜಾತಿಯ ಕಡಲಾಮೆ ಸಾವು ಕಂಡಿರುವ ಘಟನೆ ತಾಲೂಕಿನ ಕಾಸರಕೋಡು ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ಸಮೀಪ ನಡೆದಿರುವ ಬಗ್ಗೆ ವರದಿಯಾಗಿದ್ದು, ಡೊಂಕಾದ ಕಡಲ ತೀರದಲ್ಲಿ ಕಡಲಾಮೆ ಕಳೆಬರ ಪತ್ತೆಯಾಗಿದೆ. ಕಳೆದ ಎರಡು ದಿನದಿಂದ ಈ ಆಮೆ ಕಡಲ ತೀರದಲ್ಲಿ ಮೊಟ್ಟೆ ಇಡಲು ಬಂದಿತ್ತು. ಈ ಸಂದರ್ಭದಲ್ಲಿ ಕಡಲ ತೀರದಲ್ಲಿ ಬಂದರು ನಿರ್ಮಾಣಕ್ಕಾಗಿ ರಸ್ತೆ ಮಾಡಲಾಗುತಿದ್ದು ಈ ವೇಳೆ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ.
ಮಂಗಳವಾರ ಸಂಜೆ ಸ್ಥಳೀಯ ಮೀನುಗಾರರು ಈ ಘಟನೆ ಗಮನಿಸಿದ್ದು, ಕಡಲತಡಿಯಲ್ಲಿ ರಕ್ತಸಿಕ್ತವಾದ ಸ್ಥಿತಿಯಲ್ಲಿ ಕಡಲಾಮೆ ಕಳೇಬರ ಪತ್ತೆಯಾಗಿದೆ. ಸ್ಥಳೀಯ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಕಾವಲು ಸಿಬ್ಬಂದಿಗಳು ಹೊಡೆದು ಸಾಯಿಸುವ ಅಮಾನವೀಯ ಕೃತ್ಯ ಎಸಗಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಕೊಂಕಣ ಖಾರ್ವಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಇಲ್ಲಿ ನಿಷೇದಾಜ್ಞೆ ನಡುವೆಯೇ ವಾಣಿಜ್ಯ ಬಂದರು ಕಂಪನಿಯವರು ಕಡಲಾಮೆಗಳನ್ನು ಸಾಯಿಸಿ ಅವುಗಳ ಮಾರಣಹೋಮ ನಡೆಸುತ್ತಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಹೊನ್ನಾವರ ಪೋರ್ಟ ಪ್ರೈವೇಟ್ ಕಂಪೆನಿಯ ಮತ್ತು ಅದರ ಕಾವಲು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.