ಶಿರಸಿ: ಬ್ಯಾಂಕ್ ಗಳ ಖಾತೆಯ ನಿರ್ವಹಣೆ ಹಾಗೂ OTP ಕೆವೈಸಿ ವಿಚಾರದಲ್ಲಿ ಅದೆಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹುದೇ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಶಿರಸಿಯ ಮಹಿಳೆಯೋರ್ವಳಿಂದ ಅಪರಿಚಿತ ವ್ಯಕ್ತಿಯು 83 ಸಾವಿರ ರೂಪಾಯಿ ದೋಚಿದ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಅಧಿಕಾರಿ ಎಂದು ನಂಬಿಸಿ, ಆರ್‌ಡಿ ಖಾತೆಯ ಕೆವೈಸಿ ಪಡೆದು ಈ ಕೃತ್ಯ ಎಸಗಲಾಗಿದೆ.
24 ಗಂಟೆಯೊಳಗೆ ನಿಮ್ಮ ಕೆನರಾ ಬ್ಯಾಂಕ್ ಖಾತೆಯ ಕೆವೈಸಿ ಮಾಡಿಸಿ, ಇಲ್ಲವಾದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ಕೂಡಲೇ ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆಕ್ಕೆ ಸಂಪರ್ಕಿಸಿ ಎಂದು ಮೆಸೇಜ್ ಬಂದಿದೆ. ಇದನ್ನು ಗಮನಿಸಿದ ಶಿರಸಿಯ ಸಂಧ್ಯಾ ಕಿಣಿ ಎನ್ನುವವರು ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಉತ್ತರಿಸಿ, ತಾನು ಗ್ರಾಹಕ ಸೇವಾ ಕೇಂದ್ರದ ಅಧಿಕಾರಿ ಎಂದು ಪರಿಚಯಿಸಿಕೊಂಡು, ಕೆವೈಸಿ ಅಪ್ಡೇಟ್ ಮಾಡುವುದಾಗಿ ತಿಳಿಸಿ, ಎಟಿಎಂ ಕಾರ್ಡ್ ನಂಬರ್ ಹಾಗೂ ಓಟಿಪಿ ಪಡೆದುಕೊಳ್ಳುತ್ತಾನೆ. ತಕ್ಷಣವೇ, ನನ್ನ ಖಾತೆಯಿಂದ 50 ಸಾವಿರ ಹಾಗೂ 33 ಸಾವಿರದಂತೆ ಎರಡು ಬಾರಿ ಒಟ್ಟೂ 83 ಸಾವಿರ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಮಾಡಿದ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಂಧ್ಯಾ ಕಿಣಿ ದೂರು ದಾಖಲಿಸಿದ್ದಾರೆ.
ಇಂತಹ ಮೋಸದ ಬಗ್ಗೆ ಜನರು ಜಾಗೃತಿಯನ್ನು ಹೊಂದಬೇಕಾದ ಅನಿವಾರ್ಯತೆ ಇದೆ ಎಂಬ ಮಾತು ಅಧಿಕಾರಿ ವರ್ಗದವರಿಂದ ಕೇಳಿಬರುತ್ತಲಿದೆ.