ಮಂಗಳೂರು: ಮಠಕ್ಕೆ ಭೇಟಿ ನೀಡುವುದೇ ಒಂದು ಪುಣ್ಯಸ್ನಾನ ಇದ್ದಂತೆ. ಸೇವೆ ಸಲ್ಲಿಸುವುದು ಇನ್ನಷ್ಟು ಶ್ರೇಷ್ಠ. ನಮ್ಮ ಜೀವ- ಆತ್ಮವನ್ನು ಶುಚಿಗೊಳಿಸುವಂಥದ್ದು. ದಿವ್ಯತೆ, ಶುದ್ಧತೆ, ಪವಿತ್ರತೆ ನಮಗೆ ಗುರುಸೇವೆಯಿಂದ ಪ್ರಾಪ್ತವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಮಾಣಿಯ ಪೆರಾಜೆಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ 49ನೇ ವಾರ್ಷಿಕೋತ್ಸವ ಮತ್ತು ಸೂತ್ರಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಮಠದ ಕೆಲಸ ಕಾರ್ಯ, ಸೇವೆ ನಮ್ಮ ಜೀವನದ ಸಾರ್ಥಕತೆಗಾಗಿ ಇರುವಂಥದ್ದು. ಅತೀವ ಶಾಂತಿ- ಸಮಾಧಾನವನ್ನು ಒದಗಿಸಿಕೊಡುವಂಥದ್ದು. ಶ್ರೀಮಠ ಇಂದು ಪ್ರತಿಯೊಬ್ಬ ಸಮಾಜ ಬಾಂಧವರ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಮಂಗಳೂರು ಹೋಬಳಿ ಶ್ರೀಮಠಕ್ಕೆ ಅಕ್ಷಯಪಾತ್ರೆ ಇದ್ದಂತೆ. ಸಂಪನ್ಮೂಲ- ಮಾನವ ಸಂಪನ್ಮೂಲ ಹೀಗೆ ಎರಡೂ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲುತ್ತಿದೆ. ಮಹಾತ್ಕಾರ್ಯ ಸಾಕಾರಗೊಳ್ಳಬೇಕಾದರೆ ಬದ್ಧತೆಯ ಕಾರ್ಯಕರ್ತರು ಬೇಕು. ಈ ಹೋಬಳಿಯ ಸಹಸ್ರಾರು ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಬೇರೆ ಪ್ರದೇಶಗಳಲ್ಲೂ ನೇತೃತ್ವ ವಹಿಸಿ ಕೆಲಸ ಮಾಡುತ್ತಿದ್ದಾರೆ. ಶಿಸ್ತು, ನಿಷ್ಠೆ, ಕೆಚ್ಚು, ಸಾಮಥ್ರ್ಯ ಇರುವ ಅಪೂರ್ವ- ಆದರ್ಶ ಶಿಷ್ಯವರ್ಗವನ್ನು ಈ ಹೋಬಳಿ ನೀಡಿದೆ ಎಂದು ಬಣ್ಣಿಸಿದರು.


ಮಹಾತ್ಮರ ದೃಷ್ಟಿ ಬಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಮಾಣಿ ಮಠವೇ ಸಾಕ್ಷಿ. ಹಿಂದೆ ನಿರ್ಜನವಾಗಿದ್ದ ಈ ಪ್ರದೇಶದಲ್ಲಿ ಭವ್ಯ ಮಠ 48 ವರ್ಷಗಳ ಹಿಂದೆ ಪ್ರವರ್ಧಮಾನಕ್ಕೆ ಬಂದು, ಇಂದು ಇಡೀ ಲೋಕವನ್ನೇ ಬೆಳಗುತ್ತಿದೆ ಎಂದು ಹೇಳಿದರು. ಸಹಸ್ರ ವರ್ಷದ ಪೂರ್ವದಲ್ಲಿ ಸ್ಥಾಪನೆಯಾದ ಶ್ರೀಶಂಕರ ಪೀಠ ಸ್ಥಾಪನೆಯಾಗಿ ಸಮಾಜ ಕಟ್ಟುವಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದರು. ಶಂಕರಾಚಾರ್ಯರ ತಪಃಶಕ್ತಿಯ ಫಲವಾಗಿ ಅವರ ಸಂಕಲ್ಪದ ಪ್ರಭಾವದ ಫಲವಾಗಿ ಶ್ರೀಮಠ ಈ ಹಂತಕ್ಕೆ ಬೆಳೆದಿದೆ. ಇದು ಸಮಾಜದ ಹೆಮ್ಮೆ ಎಂದು ಬಣ್ಣಿಸಿದರು.
ಒಂದೆರಡು ಭಾರತೀಯ ವಿದ್ಯೆ ಕಲೆಗಳಲ್ಲಿ ಪರಿಪೂರ್ಣ ಪಾಂಡಿತ್ಯ, ಆಧುನಿಕ ವಿಜ್ಞಾನ- ತಂತ್ರಜ್ಞಾನದ ಪರಿಚಯ, ಸಮಗ್ರ ಪರಿಚಯ ಮಾಡಿಕೊಡುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ. ಪ್ರಸ್ತುತ ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಸಮಯ ನೀಡಬೇಕಾದ ಅನಿವಾರ್ಯತೆ ಇದೆ. ಆದರೆ ಮುಂದಿನ ವರ್ಷದಿಂದ ಆರಂಭವಾಗುವ ಪರಂಪರೆಗೇ ಒತ್ತು ನೀಡುವ ಗುರುಕುಲದಲ್ಲಿ ಭಾರತೀಯ ಪರಂಪರಾಗತ ಶಿಕ್ಷಣ- ಕಲೆಗೆ ಒತ್ತು ನೀಡಲಾಗುತ್ತದೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ದೂರದೃಷ್ಟಿಯನ್ನು ಹೊಂದಿದ್ದು. ಇದರ ಭವ್ಯರೂಪ ನಿಮ್ಮ ಮುಂದೆ ಅನಾವರಣಗೊಳ್ಳಲಿದೆ ಎಂದರು.
ಮಾಣಿ ಮಠ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸಭಾಪೂಜೆ ನೆರವೇರಿಸಿ, ವಾರ್ಷಿಕ ವರದಿ ಮಂಡಿಸಿದರು. ಲೇಖಕ, ಬಹುಭಾಷಾ ಪಂಡಿತ ಡಾ.ವಿ.ಬಿ.ಕುಳಮರ್ವ ಬರೆದ ಹವಿ- ಸವಿ ಹವ್ಯಕ ಕನ್ನಡ ನಿಘಂಟು ಮತ್ತು ಮದಂಗಲ್ಲು ವಂಶವೃಕ್ಷ ಕೃತಿ ಬಿಡುಗಡೆಯನ್ನು ಪರಮಪೂಜ್ಯರು ಈ ಸಂದರ್ಭದಲ್ಲಿ ನೆರವೇರಿಸಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಮಾತನಾಡಿ, “ನಾವು- ನಮ್ಮತನವನ್ನು ಬಡಿದೆಬ್ಬಿಸಲು, ಪುರಾತನ ವಿದ್ಯೆಯ ಪುನರುತ್ಥಾನಕ್ಕೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ವಿಷ್ಣುಗುಪ್ತ ವಿವಿ ತಲೆ ಎತ್ತಿದೆ” ಎಂದು ಹೇಳಿದರು. ಈ ತಿಂಗಳ 28ರಂದು ಹೊಸನಗರ ಮಠದ ಆವರಣದ ಚಂದ್ರಮೌಳೀಶ್ವರ ಸನ್ನಿಧಿಯಲ್ಲಿ ನಡೆಯುವ ಸೋಮ ಸಪರ್ಯಾ ಕಾರ್ಯಕ್ರಮದ ಬಗ್ಗೆ ಹರಿಪ್ರಸಾದ್ ಪೆರಿಯಾಪು ವಿವರ ನೀಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನದ ಬಗ್ಗೆ ಸಂಘಟನೆಯ ಉಪಾಧ್ಯಕ್ಷ ಮಹೇಶ್ ಕಜೆ ಮಾತನಾಡಿದರು.

RELATED ARTICLES  ಕಟ್ಟಿದ ಮನೆಯನ್ನೇ ಮೇಲಕ್ಕೆ ಎತ್ತುವ ತಂತ್ರಜ್ಞಾನ


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಮತ್ತಿತರ ಗಣ್ಯರು ಶ್ರೀಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಉಪಾಧ್ಯಕ್ಷೆ ಶೈಲಜಾ ಭಟ್ ಕೊಂಕೋಡಿ, ಆಡಳಿತ ಖಂಡದ ಸಂಯೋಜಕ ಶ್ರೀಕಾಂತ್ ಪಂಡಿತ್, ವಿವಿವಿ ವ್ಯವಸ್ಥಾ ಪರಿಷತ್‍ನ ಶ್ರೀಕಾಂತ ಹೆಗಡೆ, ಮಾಣಿ ಮಠ ಮಹಾಸಮಿತಿಯ ಕೋಶಾಧ್ಯಕ್ಷ ಬಂಗಾರಡ್ಕ ಜನಾರ್ದನ ಭಟ್, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಭಟ್ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಯಲ್ಲಾಪುರದಲ್ಲಿ ಸಂಚಲನ ಉಂಟುಮಾಡಿದ ಕುಮಾರಪರ್ವ ವಿಕಾಸಯಾತ್ರೆ.!


ಮಾಜಿ ಶಾಸಕ ಉರಿಮಜಲು ರಾಮಭಟ್, ಸಮಾಜದ ಗಣ್ಯರಾದ ಬಂಗಾರಡ್ಕ ರಾಮಕೃಷ್ಣ ಭಟ್, ಹಿರಣ್ಯ ಗಣಪತಿ ಭಟ್, ಪಡೀಲು ಮಹಾಬಲ ಭಟ್ ಸೇರಿದಂತೆ ಶ್ರೀಮಠದ ಸೇವಕರಾಗಿ ಶ್ರಮಿಸಿ ಗತಿಸಿದವರಿಗೆ ನುಡಿನಮನ ಸಲ್ಲಿಸಲಾಯಿತು. 18 ತಂಡಗಳ 196 ಭಜಕರು ಅಖಂಡ ಭಜನೆ ನಡೆಸಿದರು. ಆರು ವಟುಗಳಿಗೆ ಸೂತ್ರಸಂಗಮದಲ್ಲಿ ಉಪನಯನ ನೆರವೇರಿಸಲಾಯಿತು.