ಶಿರಸಿ: ತಾಲೂಕಿನ ನಿಸರ್ಗ ಮನೆಯ ವೇದ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಯಕ್ಷನೃತ್ಯ ರೂಪಕ ಪಂಚಪಾವನಕಥಾ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಯಕ್ಷಗಾನ ಪರಿಶ್ರಮದ ಕಲೆ ಎಂದು ಪ್ರಸಿದ್ದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಬಣ್ಣಿಸಿದರು.
ಎಷ್ಟೋ ಕಾರ್ಯಕ್ರಮಗಳಲ್ಲಿ ನಮ್ಮ ಹಾಸ್ಯ ಆದ ಬಳಿಕ ಯಕ್ಷಗಾನ, ಯಕ್ಷಗಾನ ಆದ ಬಳಿಕ ಹಾಸ್ಯದ ಕಾರ್ಯಕ್ರಮ ಇರುತ್ತವೆ. ಅಲ್ಲಿ ಯಕ್ಷಗಾನದ ಕಲಾವಿದರ ಸಂಕಷ್ಟ ನೋಡುತ್ತೇವೆ. ಬಣ್ಣದ ವೇಷಕ್ಕಾಗಿ ಎರಡು ತಾಸುಗಳ ಕಾಲ ಪರಿಶ್ರಮ ಮಾಡುವದನ್ನೂ ಹಾಗೂ ರಂಗಸ್ಥಳದಲ್ಲಿ ರಂಜಿಸುವದನ್ನೂ, ಪೌರಾಣಿಕ, ಈಚೆಗೆ ಸಾಮಾಜಿಕ ಪ್ರಸಂಗ ಪ್ರದರ್ಶಿಸುವದನ್ನೂ ನೋಡುತ್ತೇವೆ ಎಂದರು.
ಗಂಡಸರೇ ಹೆಣ್ಣಿನ ವೇಷ ಹಾಕೋದು, ಹೆಣ್ಣು ಮಕ್ಕಳು ಅಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಅಷ್ಟು ಚೆಂದ ವೇಷ ಮಾಡಿ ಕೊಳ್ಳುತ್ತಾರೆ. ಯಕ್ಷಗಾನದ ಹಾಸ್ಯದ ಪ್ರಸಂಗಗಳೂ ಪ್ರೇಕ್ಷಕರನ್ನು ಮನ ಸೆಳೆಯುತ್ತವೆ. ನಮ್ಮ ಕಡೆ ದೊಡ್ಡಾಟ, ಬಯಲಾಟ ಇದ್ದಂತೆ ಯಕ್ಷಗಾನ ಶ್ರೇಷ್ಠ ಕಲೆ. ಒಟ್ಟಾರೆ ಸಮಗ್ರ ಕಲೆ ಯಕ್ಷಗಾನ ಎಂದರು.
ಸಮಾಜ ಸೇವಕಿ ಅನ್ನಪೂರ್ಣ ತುಕಾರಾಮ, ಸಂಗೀತಾ ವಿ.ಹೆಗಡೆ, ಡಾ. ವೆಂಕಟೇಶ ನಾಯ್ಕ, ಕಲಾವಿದ ವೆಂಕಟೇಶ ಬೊಗ್ರಿಮಕ್ಕಿ ಇತರರು ಇದ್ದರು.ನಿಸರ್ಗ ಮನೆಯ ಮುಖ್ಯಸ್ಥ ಡಾ. ವೆಂಕಟ್ರಮಣ ಸ್ವಾಗತಿಸಿದರು. ತುಳಸಿ ಹೆಗಡೆ ಅವಳಿಂದ ಪಂಚಪಾವನಕಥಾ ಯಕ್ಷನೃತ್ಯ ರೂಪಕ ಗಮನ ಸೆಳೆಯಿತು.