ಕಾರವಾರ : ತಾಲೂಕಿನ ಕಠಿಣಕೋಣ ಹಿರೇಶಿಟ್ಟಾ ನಾಗನಾಥ ದೇವಸ್ಥಾನದ ಬಳಿ ಜನವಸತಿ ಪ್ರದೇಶದಲ್ಲಿ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯ ಜನರು ಆತಂಕಕ್ಕೊಳಗಾಗಿದ್ದಾರೆ. ಜನವಸತಿ ಹಾಗೂ ಜನರಓಡಾಟದ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ. ಸ್ಥಳೀಯರ ಪ್ರಕಾರ ಚಿರತೆ ಭಾರೀ ಗಾತ್ರದ್ದಿದ್ದು, ಹಲವು ವರ್ಷಗಳಿಂದ ನಾಯಿ ಸೇರಿದಂತೆ ಸುಮಾರು 25 ಕ್ಕೂ ಅಧಿಕ ನವಿಲುಗಳನ್ನೂ ಸಹ ತಿಂದಿದೆ. ಅಲ್ಲದೇ ಇನ್ನಿತರ ಪ್ರಾಣಿಗಳನ್ನೂ ಸಹ ಈ ಚಿರತೆ ಬಲಿ ಪಡೆದುಕೊಂಡಿದ್ದು, ಸ್ಥಳೀಯ ಜನರು ಚಿಂತೆಗೀಡಾಗುವಂತೆ ಮಾಡಿದೆ. ಹೀಗಾಗಿ ಈ ಚಿರತೆಯನ್ನು ದೂರದ ಕಾಡಿಗೆ ಬಿಟ್ಟು
ಬರಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಹಿಡಿದು ಬೇರೆಡೆ ಕೊಂಡೊಯ್ಯುವಂತೆ ಜನರು ಆಗ್ರಹಿಸಿದ್ದಾರೆ. ಅಪರೂಪದ ವನ್ಯಜೀವಿ ಪ್ರಾಣಿ ಸಸ್ತನಿಗಳಲ್ಲೊಂದಾಗ ಈ ಕಪ್ಪು ಚಿರತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದು, ಅತೀ ವಿರಳ.
ಬುಧವಾರ ಸಾರ್ವಜನಿಕರಿಗೆ ಕಾಣಿಸಿಕೊಂಡ ಈ ಚಿರತೆ ಸಹಜವಾಗಿ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರಾದರೂ, ಆ ವೇಳೆ ಚಿರತೆ ಕಾಣಿಸಿರಲಿಲ್ಲ.
ಬಳಿಕ ರಾತ್ರಿ 12 ಗಂಟೆವರೆಗೂ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದ ಆರ್.ಎಫ್.ಓ ಜಿ.ವಿ.ನಾಯ್ಕ ಹಾಗೂ ಎ.ಆರ್.ಎಫ್.ಓ. ರೂಪಾ ಹಾಗೂ ಸಿಬ್ಬಂದಿಗಳು ಕಾದು ಕುಳಿತಿದ್ದು, ಚಿರತೆ ಮಾತ್ರ ಕಂಡುಬಂದಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಾಪಸ್ಸಾಗಿದ್ದು, ಮತ್ತೆ ಚಿರತೆ ಪ್ರತ್ಯಕ್ಷವಾದರೆ ಬೆದರಿಸಿ ಓಡಿಸುವ ಕ್ರಮಕ್ಕೆ ಮುಂದಾಗಿದ್ದಾರೆ.