ಮಾಲೂರು: ಇಡೀ ಜಗತ್ತು ಇಂದು ಪ್ರಸಿದ್ಧಿಯ ಭ್ರಮೆಯಲ್ಲಿದೆ. ಜೀವನದಲ್ಲಿ ಸಿದ್ಧಿ ಸಾಧಿಸಿದಾಗ ಸಹಜವಾಗಿಯೇ ಪ್ರಸಿದ್ಧಿ ಬರುತ್ತದೆ. ಆದ್ದರಿಂದ ನಮ್ಮೆಲ್ಲರ ಪ್ರಯತ್ನ ಸಿದ್ಧಿಯತ್ತ ಇರಲಿ. ಭಕ್ತನಾಗಿ, ಯೋಗಿಯಾಗಿ ಮತ್ತು ಯೋಧನಾಗಿ ಸಿದ್ಧಿ ಸಾಧಿಸಿದ ಆಂಜನೇಯ ನಮಗೆಲ್ಲರಿಗೆ ಮಾದರಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಮಾಲೂರು ಸಮೀಪದ ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮ ಆವರಣದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಸಿದ್ದಾಂಜನೇಯ ಸ್ವಾಮಿ ದೇವಾಲಯದ ಅಷ್ಟಬಂಧ-ಪುನಃಪ್ರತಿಷ್ಠಾ-ಬ್ರಹ್ಮಕಲಶೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಯೋಗದ ಸಿದ್ದಿಯ ಜತೆಗೆ ಯೋಧನ ಸಿದ್ಧಿಯನ್ನೂ ಹೊಂದಿದ್ದ ಆಂಜನೇಯ ವೀರಾಧಿವೀರ. ಆತನ ವಿನಮ್ರತೆ ಇಡೀ ಲೋಕಕ್ಕೇ ಮಾದರಿ. ಭಕ್ತನೇ ಭಗವಂತನಾಗುವಷ್ಟರ ಮಟ್ಟಿಗೆ ಭಕ್ತನಾಗಿ ಸಿದ್ಧಿ ಹೊಂದಿದ. ಸಿಂಧುವಿನಲ್ಲಿ ಬಿಂದು ಒಂದಾಗುವಂತೆ ರಾಮನಲ್ಲಿ ಲೀನನಾದವನು. ಭಕ್ತನಾಗಿ ಇಂಥ ಅಪೂರ್ವ ಸಿದ್ಧಿ ಸಾಧಿಸಿದವರು ವಿರಳ ಎಂದು ವಿಶ್ಲೇಷಿಸಿದರು.
ಮನೆ ಮತ್ತು ಮಂದಿರ ನಿರ್ಮಿಸುವ ನಡುವೆ ದೊಡ್ಡ ಅಂತರವಿದೆ. ಎಷ್ಟೇ ವೈಭೋಗದ ಮನೆ ಇದ್ದರೂ ಸಮಾಜ ಅವರನ್ನು ಸ್ಮರಿಸಿಕೊಳ್ಳುವುದಿಲ್ಲ. ಆದರೆ ಒಂದು ಮಂದಿರ ನಿರ್ಮಿಸಿದಾಗ ಅದು ಇಡೀ ಸಮಾಜದ ಸ್ವತ್ತಾಗುತ್ತದೆ. ಇಡೀ ಸಮಾಜ ಅವರನ್ನು ಗುರುತಿಸುತ್ತದೆ. ಮನೆ ಎನ್ನುವುದು ಸ್ವಾರ್ಥ- ಸಂಕುಚಿತತೆಯ ಪ್ರತೀಕವಾದರೆ ಮಂದಿರ ಸರ್ವಾರ್ಥದ, ಪಾವಿತ್ರ್ಯದ ಪ್ರತೀಕ. ಮನೆ ಸಂಸಾರ ಬಂಧನದಲ್ಲಿ ಸಿಲುಕಿಸಿದರೆ, ಮಂದಿರ ಸಂಸಾರ ಬಂಧನದಿಂದ ಬಿಡುಗಡೆ ಮಾಡಿಸುವಂಥದ್ದು. ಮಂದಿರ ನಿರ್ಮಿಸುವುದು ಅತಿಶಯವಾದ ಸಾರ್ಥಕತೆ. ದೇವರ ಪುನಃಪ್ರತಿಷ್ಠಾಪನೆಯಂಥ ಕಾರ್ಯ ನಮ್ಮ ಜೀವನದಲ್ಲಿ ಇತಿಹಾಸವಾಗಿ ಉಳಿದುಕೊಳ್ಳುವಂಥದ್ದು ಎಂದು ಬಣ್ಣಿಸಿದರು.
ಮನೆ ಕಟ್ಟಿದಾಗ ಹಿಂದಿನ ಜನ್ಮದ ಪುಣ್ಯ ವ್ಯಯವಾದರೆ, ಮಂದಿರ ನಿರ್ಮಾಣ ಮಾಡಿದರೆ ಪುಣ್ಯ ಸಂಚಯವಾಗುತ್ತದೆ. ಮಂದಿರ ಎಷ್ಟು ದೊಡ್ಡದು ಎನ್ನುವುದಕ್ಕಿಂತ ಎಷ್ಟು ಪವಿತ್ರ ಎನ್ನುವುದು ಮುಖ್ಯ. ಇದು ಸಹಸ್ರಮಾನದ ಕೆಲಸ ಎಂದರು.
ಜೀರ್ಣೋದ್ಧಾರಗೊಂಡಿರುವ ಶ್ರೀ ಸಿದ್ಧಾಂಜನೇಯ ದೇವಾಲಯ, ತಮಿಳುನಾಡಿನ ಮಂದಿರಗಳಂತೆ ಸುಂದರ ಹಾಗೂ ಕೇರಳದ ಮಂದಿರಗಳಂತೆ ಆಯ- ವಾಸ್ತು ಲೆಕ್ಕಾಚಾರದಲ್ಲೂ ಶುದ್ಧವಾಗಿದೆ. ಮಂದಿರದ ದರ್ಶನ ಮಾತ್ರದಿಂದಲೇ ಜೀವನ ಸಾರ್ಥಕ, ಧನ್ಯ. ಸಿದ್ದಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಮಾಡುವ ಪ್ರಾರ್ಥನೆ ಸಂಕಲ್ಪ ಸಿದ್ಧಿಯಾಗುತ್ತದೆ. ಆಂಜನೇಯ ಅಷ್ಟ ಸಿದ್ದಿಗಳ ದಾತ. ಒಬ್ಬ ಯೋಗಿಯಾಗಿ ಅಣಿಯಾ, ಗರಿಮಾದಂಥ ಸ್ವಯಂ ಸಿದ್ಧಿಯನ್ನು ಸಾಧಿಸಿದ ಆಂಜನೇಯ, ಸಮುದ್ರ ಉಲ್ಲಂಘನೆಯ ಸಂದರ್ಭದಲ್ಲಿ ಮಹಿಮ (ಬೃಹತ್ ಶರೀರ) ನಾದ; ಲಂಕೆ ಪ್ರವೇಶದ ಸಂದರ್ಭದಲ್ಲಿ ಕೃಶದಂಶಕ (ಬೆಕ್ಕಿನ) ಗಾತ್ರ ಹೊಂದಿದ್ದ ಎನ್ನುವ ಉಲ್ಲೇಖ ರಾಮಾಯಣದಲ್ಲಿದೆ ಎಂದು ವಿವರಿಸಿದರು.

RELATED ARTICLES  ನನ್ನ ಅವಧಿಯಲ್ಲಿ ಅನೇಕ ಕಾರ್ಯಗಳು ನಡೆದಿವೆ : ಮಾಜಿ ಶಾಸಕಿ ಶಾರದಾ ಶೆಟ್ಟಿ.


ಕಾರ್ಯಕರ್ತರ ಶ್ರಮ, ತ್ಯಾಗದ ಪ್ರತೀಕವಾಗಿ ಸುಂದರ ಮಂದಿರ ತಲೆ ಎತ್ತಿನಿಂತಿದೆ. ಭವ್ಯ ಮಂದಿರ ನಿರ್ಮಾಣಕ್ಕೆ ಅಪಾರ ಶ್ರಮ ವಹಿಸಿದ ಎಲ್ಲ ಭಕ್ತರ ಮನೆ, ಬದುಕನ್ನೂ ಹನುಮಂತ ನಿರ್ಮಿಸಿಕೊಡಲಿ ಎಂದು ಆಶಿಸಿದರು.

RELATED ARTICLES  ಶ್ರೀ ಶ್ರೀ ಬ್ರಹ್ಮ ಚೈತನ್ಯ ಸ್ವಾಮೀಜಿಯವರಿಗೆ ಗೋಕರ್ಣ ಗೌರವ


ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ಐಟಿಸಿ ಫ್ಯಾಕ್ಟರಿ ಬಳಿಯಿಂದ ರಾಘವೇಂದ್ರ ಗೋ ಆಶ್ರಮ ವರೆಗಿನ ರಸ್ತೆಯನ್ನು ತಕ್ಷಣ ಡಾಂಬರೀಕರಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶ್ರೀರಾಮಚಂದ್ರಾಪುರ ಮಠ ಮಾಡುತ್ತಿರುವ ಗೋಸೇವೆ ಇಡೀ ಸಮಾಜಕ್ಕೆ ಸ್ಫೂರ್ತಿ ಎಂದು ಬಣ್ಣಿಸಿದರು.
ಕೋಲಾರ ಸಂಸದ ಮುನಿಸ್ವಾಮಿ, ಶ್ರೀಮಠದ ಸಿಇಓ ಕೆ.ಜಿ.ಭಟ್, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಮಾ ಗೋ ಪ್ರಾಡೆಕ್ಟ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಸೋನಿಕಾಜಿ, ದೇವಾಲಯ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ರಾಮಕೃಷ್ಣ ರಾವ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಡಾ.ಶ್ಯಾಮ್‍ಪ್ರಸಾದ್, ಕಾರ್ಯದರ್ಶಿ ಶ್ರೀಕಾಂತ್ ಹೆಗಡೆ, ಕೋಶಾಧ್ಯಕ್ಷ ರಾಮಕೃಷ್ಣ ಹೆಗಡೆ ಕಲ್ಲಬ್ಬೆ, ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಹವ್ಯಕ ಮಹಾಮಂಡಲದ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಗ್ರಾಮಪಂಚಾಯ್ತಿ ಅಧ್ಯಕ್ಷೆ ಸರೋಜಾ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಠದ ಧರ್ಮ ಕರ್ಮ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಭಟ್ ಕೂಟೇಲು ಪ್ರಾಸ್ತಾವಿಕ ಭಾಷಣ ಮಾಡಿದರು. ಹೂಡಿ ವಿಜಯ ಕುಮಾರ್, ತಹಶೀಲ್ದಾರ್ ರಮೇಶ್, ಆ.ಪು.ನಾರಾಯಣಪ್ಪ, ವೇಮನ ಮತ್ತಿತರರು ಭಾಗವಹಿಸಿದ್ದರು.