ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಜನಪದ ಕಲಾವಿದ ಮಹಾದೇವ ವೇಳಿಪ (90) ರವರು ಇಂದು ಮೃತರಾಗಿದ್ದಾರೆ. ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪ ರವರು ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ಜಾನಪದ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದರು.
ಜಿಲ್ಲೆಯ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಣಬಿ ಸಮುದಾಯದ ಜಾನಪದ ಭಂಡಾರವಾಗಿದ್ದ ಇವರು, ಅಕ್ಷರವೇ ಗೊತ್ತಿರದಿದ್ದರೂ ಅಪಾರವಾದ ಜನಪದದ ಭಂಡಾರವನ್ನು ಹೊಂದಿದ್ದರು. ಅರಣ್ಯವೇ ಅವರ ಬದುಕಾಗಿತ್ತು. ಜೊಯಿಡಾದಿಂದ ಹದಿನೈದು ದೂರವಿರುವ ಕಾರ್ಟೋಳಿ ಎಂಬ ಹಳ್ಳಿಯಲ್ಲಿ ತಮ್ಮ ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಸುಮಾರು 60 ವರ್ಷಗಳಿಂದ ಜಾನಪದ ಕಲಾವಿದರಾಗಿದ್ದು, ಕುಣಬಿ ಸಾಂಪ್ರದಾಯಿಕ ಕುಣಿತ, ಕಾಡು, ಪ್ರಾಣಿ, ಮತ್ತು ಪ್ರಕೃತಿಗೆ ಸಂಬಂಧಿಸಿದ ಅನೇಕ ಕಥೆಗಳು, ತುಳಸಿ ಪದ, ರಾಮಾಯಯಣ ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಹಾಡುಗಳನ್ನು ಇವರು ಹಾಡಬಲ್ಲವರಾಗಿದ್ದರು.
ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂತಹ ಅನೇಕ ಹಾಡುಗಳನ್ನು ಇವರು ಹಾಡುತ್ತಿದ್ದರು. ಕುಣಬಿಗಳ ಶಿಗ್ಮೋ ಖೇಳ ಹಾಡುಗಳು, ಉತ್ತರ ಕನ್ನಡ ಜಿಲ್ಲೆಯ ಜೀವ ನದಿಯಾದ ಕಾಳಿ ನದಿಯ ಉಗಮಕ್ಕೆ ಸಂಬಂಧಿಸಿದ ಹಾಡುಗಳು, ಮಳೆಗಾಗಿ ಪ್ರಾರ್ಥಿಸುವ ಹಾಡುಗಳು, ಕಾಡುಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಹಾಡುಗಳು, ಕುಂಬ್ರಿ (ರಾಗಿ) ಬೇಸಾಯ ಪದ್ಧತಿಗೆ ಸಂಬಂಧಿಸಿದ ಹಾಡುಗಳು ಇಂದಿಗೂ ಕೂಡ ನೆನಪಿಟ್ಟುಕೋಂಡು ಅವರು ಹಾಡುತ್ತಿದ್ದರು.
ನೂರಾರು ಬಗೆಯ ಗೆಡ್ಡೆ ಗೆಣಸುಗಳನ್ನು ಉಳಿಸಿ ಬೆಳಸುವ ಜೊತೆ ಅರಣ್ಯ ಸಂರಕ್ಷಣೆಸಹ ಮಾಡಿದ್ದ ಮಹಾದೇವ ವೇಳಿಪ ರವರು ಜನಪದ ಹಾಡುಗಳನ್ನು ಸಾವಿರ ಲೆಕ್ಕದಲ್ಲಿ ನಿರಂತರ ಹಾಡುತಿದ್ದರು. ನಾಟಿ ವೈದ್ಯ ಸಹ ಆಗಿದ್ದ ಇವರು ಸರಳ ಸಜ್ಜನಿಕೆ ಎಲ್ಲರನ್ನೂ ಸೆಳೆಯುತಿತ್ತು. ಕಳೆದ ಎರಡು ದಿನದಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು ಇಂದು ದೈವಾದೀನರಾಗಿದ್ದಾರೆ.