ಬೆಂಗಳೂರು:ಪತ್ರಕರ್ತೆ ಗೌರಿ ಲಂಕೇಶ್ ರವರ ಹತ್ಯೆಯ ಹಿನ್ನೆಲೆಯಲ್ಲಿ ತನಿಖೆಗಾಗಿ ಮಾನ್ಯ ರಾಜ್ಯ ಸರ್ಕಾರವು ರಚಿಸಿದ ವಿಶೇಷ ತನಿಖಾ ತಂಡಕ್ಕೆ ಪ್ರೇಮಲತಾ ಹಾಗೂ ಸಿ.ಎಂ. ದಿವಾಕರ ಶಾಸ್ತ್ರೀ ಎಂಬುವವರು ಅರ್ಜಿ ಸಲ್ಲಿಸಿ, ರಾಘವೇಶ್ವರ ಭಾರತೀ ಸ್ವಾಮೀಜಿಯವರು ಈ ಕೃತ್ಯದ ಹಿಂದಿದ್ದಾರೆ ಎಂದು ಹೇಳಿರುವ ವಿಚಾರ ಎಲ್ಲಡೆ ಸದದ್ದು ಮಾಡಿತ್ತು.

ಈ ಸಂಬಂಧ ರಾಮಚಂದ್ರಾಪುರಮಠ ಪ್ರತಿಕ್ರಿಯೆ ನೀಡಿದ್ದು ಇದು ಕುತಂತ್ರ ಎಂದು ಸ್ಪಷ್ಟನೆ ನೀಡಿದೆ. ಪತ್ರಕರ್ತೆ ಗೌರಿ ಲಂಕೇಶ್ ರವರನ್ನು ಗುಂಡಿಕ್ಕಿ ಕೊಲೆಗೈದಿರುವುದು ಅತ್ಯಂತ ವಿಷಾಧನೀಯ ಹಾಗೂ ಖಂಡನೀಯ ಆದರೆ ಈ ಹತ್ಯೆಗೂ ಮತ್ತು ರಾಮಚಂದ್ರಾಪುರಮಠಕ್ಕೂ ಹಾಗೂ ರಾಘವೇಶ್ವರ ಭಾರತೀ ಸ್ವಾಮೀಜಿರವರಿಗೂ ಯಾವುದೇ ಸಂಬಂದವಿರುವುದಿಲ್ಲ. ಶ್ರೀಮಠಕ್ಕಾಗಲೀ, ಶ್ರೀಗಳವರಿಗಾಗಲೀ ಯಾರ ಬಗ್ಗೆಯೂ ಕೂಡಾ ಪೂರ್ವಾಗ್ರಹ ಅಥವಾ ಸೇಡು ಯಾ ವೈಮನಸ್ಸು ಇರುವುದಿಲ್ಲ. ಯಾವುದೇ ಜೀವಹಿಂಸೆಯಾಗಲೀ, ಜೀವಹರಣವಾಗಲೀ ಎಂದಿಗೂ ಶ್ರೀಮಠದ ಕಾರ್ಯವಾಗಿರುವುದಿಲ್ಲ, ಬದಲಿಗೆ ಜೀವರಕ್ಷಣೆಗಾಗಿ ಶ್ರೀಮಠ ಅವಿರತವಾಗಿ ಶ್ರಮಿಸುತ್ತಿರುವುದು ಸರ್ವವಿಧಿತ ಎಂದು ಈ ಸಂದರ್ಭದಲ್ಲಿ ಮತ್ತೆ ಸ್ಪಷ್ಟಿಕರಣ ಸಂಸ್ಥಾನ ನೀಡಿದೆ.

ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರೀ ದಂಪತಿಗಳು ರಾಮಚಂದ್ರಾಪುರ ಮಠ ಮತ್ತು ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿರುದ್ಧ ನಡಿಸಿಕೊಂಡು ಬಂದಿರುವ ಹಲವಾರು ಷಡ್ಯಂತ್ರ ಹಾಗೂ ಪಿತೂರಿಗಳನ್ನು ಮುಂದುವರೆದ ಭಾಗ ಇದಾಗಿದೆ. ಪ್ರಾರಂಭದಲ್ಲಿ ದಾಖಲಾದ ಹೊನ್ನಾವರ ಪೋಲೀಸ್ ಠಾಣಾ ಪ್ರಕರಣದಲ್ಲಿ ಸಿ.ಐ.ಡಿ. ಅಧಿಕಾರಿಗಳು ಸದರಿ ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಅಂತಿಮ ವರದಿ ಸಲ್ಲಿಸಿದ್ದು, ದಿನಾಂಕ:04.09.2017 ರಂದು ದೂರುದಾರ ಬಿ.ಆರ್. ಚಂದ್ರಶೇಖರ್ ರವರು ಇದು ಪ್ರೇಮಲತಾ ಮತ್ತು ಸಿ.ಎಂ. ದಿವಾಕರಶಾಸ್ತ್ರಿ ಮತ್ತು ಇತರರು ಶ್ರೀಮಠ ಮತ್ತು ಶ್ರೀಗಳವರ ಮೇಲೆ ಹೂಡಿರುವ ಷಡ್ಯಂತ್ರವಾಗಿದೆ ಎಂದು ಸಕಲ ಸಾಕ್ಷಾಧಾರಸಹಿತವಾಗಿ ತಮ್ಮ ಖಾಸಗಿ ಪಿರ್ಯಾದು ರೂಪದ ತಕರಾರು ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಿ.ಸಿ.ಐ.ಡಿ. ಪೋಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು ತಿರಸ್ಕರಿಸಿ, ಪ್ರಕರಣದ ವಿಚಾರಣೆ ನಡೆಸಿ, ಮಾನ್ಯ ಘನ ನ್ಯಾಯಾಲಯವು ಆರೋಪಿತರ ಮೇಲೆ ಕಾನೂನು ಪ್ರಕಾರ ದಂಡನೆ ವಿಧಿಸಬೇಕೆಂದು ಪ್ರಾರ್ಥಿಸಿ, ಷಡ್ಯಂತ್ರವನ್ನು ಬಯಲು ಮಾಡಿದ್ದಕ್ಕೆ ಗಲಿಬಿಲಿಗೊಂಡು ದಂಪತಿಗಳು ಈ ಆರೋಪದಿಂದ ತಪ್ಪಿಸಿಕೊಳ್ಳಲು ಇದಾಗಿ ನಾಲ್ಕೇ ದಿನಕ್ಕೆ ಶ್ರೀಮಠದ ಹಾಗೂ ಶ್ರೀಗಳವರ ಮೇಲೆ 500 ಪುಟಗಳನ್ನೊಳಗೊಂಡ ದೂರು ಅರ್ಜಿ ಸಲ್ಲಿಕೆಯಾಗಿರುವುದು ಷಡ್ಯಂತ್ರದ ಮುಂದುವರಿದ ಭಾಗವಲ್ಲದೇ ಮತ್ತೇನು? ಶ್ರೀಗಳವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಈ ದಂಪತಿಗಳಿಂದ ಪದೇ ಪದೇ ನಡೆಯುತ್ತಿದ್ದು, ಶ್ರೀಗಳವರ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ನೀಡುವ ವ್ಯಕ್ತಿಗಳನ್ನು ತೀವ್ರ ತನಿಖೆಯನ್ನು ಮಾಡಬೇಕೆಂದು ಶ್ರೀಮಠವು ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ನೂತನ ಕಮಾಂಡರ್ ಆಗಿ ಉತ್ತರಕನ್ನಡದ ಮನೋಜ್

ದಿವಾಕರ ಶಾಸ್ತ್ರೀ ದಂಪತಿಗಳ ಮೇಲೆ ಶ್ರೀಮಠ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಕ್ಕೋಸ್ಕರ, ಸದರಿ ದಂಪತಿಗಳು ನೀಡಿದ್ದರೆನ್ನಲಾದ ದೂರಿನ ಒಂದು ಪ್ರತಿಯನ್ನು ನಮಗೆ ತುರ್ತಾಗಿ ಒದಗಿಸಬೇಕೆಂದು ಕೇಳಿದ್ದು, ಪ್ರತಿ ಲಭಿಸಿದ ನಂತರ, ಒಂದೇ ಒಂದು ಸಾಕ್ಷಿ ಇಲ್ಲದೆ ದೂರು ನೀಡಿ ಶ್ರೀಮಠ ಹಾಗೂ ಶ್ರೀಗಳವರ ತೇಜೋವಧೆ ಮಾಡಿರುವವರ ಮೇಲೆ ಒಂದು ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತೇವೆ ಹಾಗೂ ಸುಳ್ಳು ಆರೋಪ ಹೊರಿಸುತ್ತಿರುವ ಶ್ರೀಮತಿ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬೆಳಕಿಗೆ ತರಬೇಕಾಗಿ ವಿಶೇಷ ತನಿಖಾ ತಂಡವನ್ನು ಶ್ರೀಮಠವು ಆಗ್ರಹಿಸಿದೆ.