ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಆಟಿಕೆ ಸಾಮಗ್ರಿಗಳನ್ನು ಖರೀದಿಸಲು ಹೋದ ಗ್ರಾಹಕನಿಗೆ ರಾಜಸ್ಥಾನಿ ವ್ಯಾಪಾರಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ವರದಿಯಾಗಿದೆ. ಕುಮಟಾ ಜಾತ್ರೆಯಲ್ಲಿ ಆಟಿಗೆ ಸಾಮಗ್ರಿಗಳನ್ನು ಮಾರಾಟ ಮಾಡಲು ಬಂದ ರಾಜಸ್ತಾನಿ ವ್ಯಾಪಾರಸ್ಥರು ಹೊಸ ಬಸ್ ನಿಲ್ದಾಣದಲ್ಲಿರುವಾಗ ಆಟಿಗೆ ಸಾಮಗ್ರಿಗಳನ್ನು ಕೊಳ್ಳಲು ಮಹಿಳಾ ವ್ಯಾಪಾರಿ ಬಳಿ ತಾಲೂಕಿನ ಸಂತೆಗುಳಿ ಗ್ರಾಪಂ ವ್ಯಾಪ್ತಿಯ ಉಳೂರುಮಠ ವ್ಯಕ್ತಿಯೋರ್ವ ತೆರಳಿದ್ದಾನೆ. ಚೌಕಾಸಿ ಮಾಡುವ ಸಂದರ್ಭದಲ್ಲಿ ಮಹಿಳಾ ವ್ಯಾಪಾರಿ ಮತ್ತು ಈತನ ನಡುವೆ ಜಟಾಪಟಿ ನಡೆದಿದೆ. ಇದನ್ನೆ ತಪ್ಪಾಗಿ ಅರ್ಥೈಸಿಕೊಂಡ ಮಹಿಳಾ ವ್ಯಾಪಾರಿ ಕಡೆಯ ಪುರುಷರು ಈತನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ತಾಲೂಕಿನ ಉಳೂರು ಮಠದವರು ಎನ್ನಲಾಗಿದೆ.
ಈ ವ್ಯಾಪಾರಸ್ಥರು ಮಾಡಿದ ಹಲ್ಲೆಗೆ ವ್ಯಕ್ತಿಯ ಮೂಗಲ್ಲಿ, ಬಾಯಲ್ಲಿ ರಕ್ತ ಸೋರುತ್ತಿತ್ತು. ಅಲ್ಲಿಯೇ ಹತ್ತಿರದಲ್ಲಿದ್ದ ಸಾರಿಗೆ ನೌಕರರು ಮತ್ತು ಪೊಲೀಸರು ಜಗಳ ಹಲ್ಲೆಗೊಳಗಾದ ವ್ಯಕ್ತಿಯನ್ನು ವ್ಯಾಪಾರಿಗಳಿಂದ ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ.