ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಪ್ರೌಢಶಾಲೆಯಲ್ಲಿ ಫೆಬ್ರುವರಿ 12 ಶನಿವಾರದಂದು ದತ್ತಿನಿಧಿ ವಿತರಣೆ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಗಳು ನಡೆದವು. ನಾಲ್ಕು ದಶಕಗಳ ಹಿಂದೆ ಇಲ್ಲಿನ ವಿದ್ಯಾರ್ಥಿಯಾಗಿದ್ದ ಶಾಲೆಯ ಪ್ರಥಮ ಸಾಫ್ಟವೇರ್ ಇಂಜಿನಿಯರ್ ಆದ ಪ್ರಭಾಕರ ಜಿ ಹೆಗಡೆ ಹಂಚಿನಮನೆ ಕಾನಳ್ಳಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಮಹನೀಯರು ಇಟ್ಟ ದತ್ತಿನಿಧಿಗಳನ್ನು ಹಾಗೂ ಪ್ರೌಢಶಾಲೆಯ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಪುರಸ್ಕಾರಗಳನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾದ ಪ್ರಭಾಕರ ಹೆಗಡೆ ತಮ್ಮ ಶಾಲಾದಿನಗಳನ್ನು ನೆನಪಿಸಿಕೊಂಡರು. ವಿಪ್ರೋ ಕಂಪನಿಯ ಉದ್ಯೋಗಿಯಾಗಿದ್ದಾಗ ಆಗ ತಾನೆ ಹೊಸದಾಗಿದ್ದ ಕಂಪ್ಯೂಟರ್‌ಗಳನ್ನು ಬಳಸಲು ವಿವಿಧ ಸಂಸ್ಥೆ ಹಾಗೂ ಇಲಾಖೆಗಳಿಗೆ ಸೂಚಿಸುವಾಗಿನ ಸವಾಲುಗಳ ಬಗ್ಗೆ ವಿವರಿಸಿದರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಇಂದಿನ ಮೊಬೈಲ್‌ಗಳನ್ನು ಸೂಕ್ತವಾಗಿ ಬಳಸುವ ಮೂಲಕ ಜಗತ್ತಿಗೆ ತೆರೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಬಗ್ಗೆ ಮನಮುಟ್ಟುವಂತೆ ಮಾರ್ಗದರ್ಶನ ಮಾಡಿದರು.
ಪ್ರಸಕ್ತ ವರ್ಷ ಗುಜರಾತ್ ರಾಜ್ಯದ ಆನಂದ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ(ಅಗ್ರಿ)ಯಲ್ಲಿ ಬಂಗಾರ ಪದಕ ಪಡೆದ ಶಾಲೆಯ ಇನ್ನೋರ್ವ ಹಳೆಯ ವಿದ್ಯಾರ್ಥಿನಿ ಕುಮಾರಿ ಪವಿತ್ರಾ ಗಂಗಾಧರ ಹೆಗಡೆ ಹೆಗಡೆಕಟ್ಟಾ ಇವಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಮಿತಿ ಅಧ್ಯಕ್ಷರಾದ ಎಂ.ಆರ್ ಹೆಗಡೆ ಹೊನ್ನೆಕಟ್ಟಾ ವಹಿಸಿದ್ದರು. ನಿವೃತ್ತ ಮುಖ್ಯಾಧ್ಯಾಪಕರಾದ ವಿ.ಪಿ.ಹೆಗಡೆ ಹನ್ಮಂತಿ, ಕಾರ್ಯದರ್ಶಿ ಜಿ.ಎನ್.ಹೆಗಡೆ ಉಪಾಧ್ಯಕ್ಷರಾದ ವನಿತಾ ಹೆಗಡೆ ಎಂ.ವಿ.ಹೆಗಡೆ ಹಾಗೂ ಕುಮಾರಿ ಪವಿತ್ರಾಳ ಪಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕರಾದ ಶೈಲೇಂದ್ರ ಎಂ.ಎಚ್ ಸ್ವಾಗತಿಸಿದರು. ಶಿಕ್ಷಕರಾದ ಆರ್.ಎನ್. ಹೆಗಡೆ ಪ್ರಸಕ್ತ ವರ್ಷದ ವರದಿ ವಾಚನ ಮಾಡಿದರು. ಶಿಕ್ಷಕಿಯರಾದ ವೀಣಾ ಭಟ್, ಸೌಮ್ಯಾ ಭಟ್ ಎಂ.ಎಚ್.ನಾಯಕ, ಕೆ.ಎನ್. ನಾಯ್ಕ್ ಇವರುಗಳು ಕ್ರಮವಾಗಿ ದತ್ತಿನಿಧಿ ವಿತರಣೆ, ಪ್ರತಿಭಾ ಪುರಸ್ಕಾರ, ಕ್ರೀಡಾ ಬಹುಮಾನಗಳು ಹಾಗೂ ಸಾಂಸ್ಕೃತಿಕ ಬಹುಮಾನ ವಿತರಣಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಹಿರಿಯ ಶಿಕ್ಷಕರಾದ ಎಸ್.ಆರ್. ಹೆಗಡೆ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು. ಕೊನೆಯಲ್ಲಿ ಶಿಕ್ಷಕರಾದ ಎಂ.ಎಸ್.ಗೌಡ ವಂದಿಸಿದರು. ಮುಖ್ಯ ಅತಿಥಿಗಳಾದ ಪ್ರಭಾಕರ ಹೆಗಡೆ ಮಕ್ಕಳಿಗೆ ಸಿಹಿ ವಿತರಿಸಿ ಶುಭ ಕೋರಿದರು.