ಅಂಕೋಲಾ: ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಹೆಬ್ಬಾವುಗಳನ್ನು ಕಂಡ ಜನ ಕಂಗಾಲಾಗಿದ್ದರು. ಹೆಬ್ಬಾವು ಎಂದರೇ ಹೆದರೋ ಜನರು ನಾಲ್ಕು ಹೆಬ್ಬಾವು ಕಂಡು ನಾಲ್ಕು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಉರಗ ಸಂರಕ್ಷಕ ಮಹೇಶ ನಾಯ್ಕ ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ತಾಲೂಕಿನ ಸಿಂಗನಮಕ್ಕಿಯಲ್ಲಿ ಅರಣ್ಯ ಇಲಾಖೆ ಯ ಗೇರು ನಡುತೋಪಿನಲ್ಲಿ ನಡೆದಿದೆ.
ಸಿಂಗನಮಕ್ಕಿಯ ಗೇರು ತೋಪಿನಲ್ಲಿ ಎರಡು ಹೆಬ್ಬಾವುಗಳು ಇರುವುದನ್ನು ಗಮನಿಸಿ ಮಹೇಶ ನಾಯ್ಕ ಅವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹೇಶ ನಾಯ್ಕ ಎರಡು ಹೆಬ್ಬಾವುಗಳನ್ನು ಹಿಡಿಯಲು ಮುಂದಾಗುತ್ತಿದ್ದಂತೆ, ಹತ್ತಿರದಲ್ಲಿಯೇ ಇನ್ನೆರಡು ಹೆಬ್ಬಾವುಗಳು ಕಾಣಿಸಿಕೊಂಡವು ಎನ್ನಲಾಗಿದೆ. ಉರಗ ತಜ್ಞ ಮಹೇಶ ನಾಯ್ಕ ಅವರು ಹೆಬ್ಬಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಹೆಬ್ಬಾವಿನ ಹೊರತಾಗಿ ಬಾಳೇಗುಳಿಯ ಹರ್ಷದ್ ಎನ್ನುವವರ ಮನೆಯಲ್ಲಿ ಕಂಡು ಬಂದ ನಾಗರಹಾವನ್ನು ಮತ್ತು ಕಾರವಾರ ಅರ್ಗಾದ ರಾಮದಾಸ ಗುನಗಾ ಎನ್ನುವವರ ಮನೆಯಲ್ಲಿ 8 ಕೋಳಿ ಮೊಟ್ಟೆ ನುಂಗಿದ ನಾಗರಹಾವನ್ನು ಹಿಡಿದು ಅವರು ಮುಂದಿನ ಕ್ರಮ ಕೈಗೊಂಡರು ಎನ್ನಲಾಗಿದೆ.