ಭಟ್ಕಳ: ತಾಲೂಕಿನ ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಡಾ. ಆರ್. ಎನ್. ಶೆಟ್ಟಿಯವರ ಹಿರಿಯ ಪುತ್ರ ಸತೀಶ ಶೆಟ್ಟಿ ಸೋಮವಾರ ಅಧಿಕಾರ ಸ್ವೀಕರಿಸಿದರು. ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದ್ದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರದ ಆಡಳಿತ ಧರ್ಮದರ್ಶಿಯಾಗಿದ್ದ ಡಾ. ಆರ್. ಎನ್. ಶೆಟ್ಟಿಯವರ ನಿಧನದಿಂದ ಸ್ಥಾನ ತೆರವಾಗಿತ್ತು. ರಾಜ್ಯ ಧಾರ್ಮಿಕ ಪರಿಷತ್ತು ಮುರ್ಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯನ್ನಾಗಿ
ಸತೀಶ ಶೆಟ್ಟಿ ಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದನ್ನು ಅನುಸರಿಸಿ ಆಡಳಿತವನ್ನು ಅವರು ವಹಿಸಿಕೊಂಡರು.
ಸೋಮವಾರ ಬೆಳಿಗ್ಗೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಭಾಗವಹಿಸಿ, ಮುರುಡೇಶ್ವರ ದೇವರಿಗೆ ಅಭಿಷೇಕ,ಅರ್ಚನೆ ನೆರವೇರಿಸಿದರು. ಸತೀಶ ಶೆಟ್ಟಿಯವರಿಗೆ ಆಶೀರ್ವಾದ ನೀಡಿ ತಮ್ಮ ಅಧಿಕಾರಾವಧಿಯಲ್ಲಿ ಮುರ್ಡೇಶ್ವರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಿ ಜನತೆಗೆ ದೇವರ ಅನುಗ್ರಹ ಪ್ರಾಪ್ತವಾಗುವಂತಾಗಲಿ ಎಂದು ಹಾರೈಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಸತೀಶ ಶೆಟ್ಟಿ, ತಮ್ಮ ತಂದೆಯವರು ಮುರ್ಡೇಶ್ವರಕ್ಕಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವರ ಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದರು. ಮುರ್ಡೇಶ್ವರದ ಅಭಿವೃದ್ಧಿಯಲ್ಲಿ ಸ್ಥಳೀಯರು, ಭಕ್ತರು ಸಹಕಾರ ನೀಡುವಂತೆಯೂ ಅವರು ಕೋರಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿದ್ದ ಮಮತಾದೇವಿ ಜಿ.ಎಸ್. ಅವರು ಉಪಸ್ಥಿತರಿದ್ದರು.