ಭಟ್ಕಳ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಗಂಗಾಧರ ನಾಯ್ಕ ನೇಮಕಗೊಂಡಿದ್ದಾರೆ. ಭಟ್ಕಳದಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಮಾಲೋಚನ ಸಭೆಯಲ್ಲಿ ಸಂಗ್ರಹಿಸಿದ ಅಭಿಪ್ರಾಯ ಹಾಗೂ ಕನ್ನಡ ನಾಡು ನುಡಿಯ ಸೇವೆ ಮತ್ತು ಸಂಘಟನೆಯನ್ನು ಪರಿಗಣಿಸಿ ತಾಲೂಕಾಧ್ಯಕ್ಷ ಸ್ಥಾನಕ್ಕೆ ಗಂಗಾಧರ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಘೋಷಿಸಿದ್ದಾರೆ. ಈ ಹಿಂದೆಯೂ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಗಂಗಾಧರ ನಾಯ್ಕ ಮೂರು ವರ್ಷಗಳಲ್ಲಿ ಪುಸ್ತಕೋತ್ಸವ ಎಂಬ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ, ಮನೆಗೊಂದು ಗಿಡ ಮನಸಿಗೊಂದು ಪುಸ್ತಕ, ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಡಿನ ಏಕೀಕರಣ ಇತಿಹಾಸ ಅರಿವು ಉಪನ್ಯಾಸ ಕಾರ್ಯಕ್ರಮ, ಆಜೀವ ಸದಸ್ಯರೆಡೆ ಕಸಾಪ ನಡಿಗೆ, ಶಿಕ್ಷಕರಿಗೆ ಕವನ ರಚನಾ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ನಾಡು ನುಡಿ ಸಂಬAಧಿಸಿದ ಗೀತ ಗಾಯನ, ಭಾಷಣ ಸ್ಪರ್ಧೆ, ರಸಪ್ರಶ್ನೆಯಂತಹ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು, ಕವಿ ಜಯಂತಿ, ಮನೆಯಂಗಳದಲ್ಲಿ ಕಾವ್ಯೋತ್ಸವ, ರಥಬೀದಿಯಲ್ಲಿ ಕಾವ್ಯೋತ್ಸವ, ರಂಗಭೂಮಿ ಕಲಾವಿದರಿಗೆ ಸನ್ಮಾನ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ದುರ್ಗಪ್ಪ ಗುಡಿಗಾರ ನುಡಿನಮನ ಕಾರ್ಯಕ್ರಮ, ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಪ್ರತಿಶತ ನೂರು ಅಂಕಗಳನ್ನು ಪಡೆದ ಮತ್ತು ಮತ್ತು ಕನ್ನಡ ಮಾಧ್ಯಮದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ, ಪುಸ್ತಕ ಬಿಡುಗಡೆಯ ಜೊತೆಗೆ ಸಾಹಿತಿಗಳೊಂದಿಗೆ ಸಂವಾದ ಮುಂತಾದ ಅರವತ್ತಕ್ಕೂ ಹೆಚ್ಚು ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಆ ಮೂಲಕ ಜಿಲ್ಲೆಗೆ ಪ್ರಥಮ ಎಂಬಂತೆ ಭಟ್ಕಳ ತಾಲೂಕು ಘಟಕಕ್ಕೆ ಜಿಲ್ಲಾ ಮಟ್ಟದ ಸಾಹಿತ್ಯ ಸಾರಥ್ಯ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಎರಡು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿರುವುದಲ್ಲದೇ ಕನ್ನಡ ಪರ ಚಟುವಟಿಕೆಗಳ ಮೂಲಕ ಮನೆ ಮನೆಗಳಿಗೆ, ಶಾಲೆ ಶಾಲೆಗಳಿಗೆ ಸಾಹಿತ್ಯ ಪರಿಷತ್ತಿನ ಮೂಲೋದ್ದೇಶ ತಲುಪುವಂತೆ ಮಾಡಿ ಜಿಲ್ಲೆಯ ಗಮನ ಸೆಳೆದಿದ್ದಾರೆ. ಎಲ್ಲರ ಮಾರ್ಗದರ್ಶನ ಹಾಗೂ ಸಹಕಾರ, ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಾಮೂಹಿಕ ಪ್ರಯತ್ನದಿಂದ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ್ನು ಜನರೆಡೆಗೆ ಮತ್ತು ಜನರನ್ನು ಸಾಹಿತ್ಯ ಪರಿಷತ್ತಿನೆಡೆಗೆ ಸೆಳೆಯುವ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಯಿತು. ಇನ್ನು ಮುಂದೆಯೂ ಕನ್ನಡದ ಕೈಂಕರ್ಯವನ್ನು ಕೈಗೊಳ್ಳಲು ಎಲ್ಲರ ಸಹಕಾರವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೋರಿದ್ದಾರೆ.