ಧಾರವಾಡ : ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ನಿಧನರಾಗಿದ್ದಾರೆ. ಚೆನ್ನವೀರ ಕಣವಿ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಕಳೆದ ಜ.14ರಂದು ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದರು. ವಯಸ್ಸಿನ ಕಾರಣಕ್ಕೆ ತ್ವರಿತ ಗತಿಯಲ್ಲಿ ಗುಣಮುಖರಾಗುತ್ತಿಲ್ಲ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ಒಂದು ತಿಂಗಳು ಹೆಚ್ಚು ಚಿಕಿತ್ಸೆ ಪಡೆದ ಕಣವಿ ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಚನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್‌ಎಂದು ಪ್ರಸಿದ್ಧಿರಾದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು. ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು.
ಕಣವಿ ಅವರ ಪಾರ್ಥಿವ ಶರೀರ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗುತ್ತಿದ್ದು, ಬಳಿಕ ಅಂತ್ಯ ಸಂಸ್ಕಾರ ಇಂದು ಸಂಜೆ 5 ಗಂಟೆಗೆ ಧಾರವಾಡದ ಸೃಷ್ಟಿ ಫಾರ್ಮ ಹೌಸನಲ್ಲಿ ಮಾಡಲು ಚಿಂತಿಸಲಾಗಿದೆ.