ಶಿರಸಿ ಪಟ್ಟಣ ಹಾಗೂ ಸುತ್ತಮುತ್ತಲಿನ ಅನೇಕ ದೇವಸ್ಥಾನಗಳ ಅರ್ಚಕರನ್ನು ಯುವಾಬ್ರಿಗೇಡ್ ವತಿಯಿಂದ ರಾಯರಪೇಟೆ ರಸ್ತೆಯ ರಾಮಕೃಷ್ಣ ಸ್ಟೂಡೆಂಟ್ ಹೋಮ್ ಆವರಣದಲ್ಲಿ ಸನ್ಮಾನಿಸಲಾಯಿತು.

ಯುವಾಬ್ರಿಗೇಡ್ ಕಳೆದ ಏಳು ವರ್ಷಗಳಿಂದ ಫೆಬ್ರುವರಿ14ನ್ನು ದೇಶಪ್ರೇಮಿಗಳ ದಿನ ಎಂದ ಆಚರಿಸುತ್ತಾ ಬಂದಿದೆ. ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುವ ಕೊಡುಗೆಯನ್ನು ಪರಿಗಣಿಸಿ ಪ್ರತಿವರ್ಷ ಒಂದೊಂದು ವರ್ಗದ ಜನರನ್ನು ಸನ್ಮಾನಿಸಲಾಗುತ್ತದೆ. ಈ ಬಾರಿ ದೇವಸ್ಥಾನದ ಅರ್ಚಕರಿಗೆ ಸನ್ಮಾನಿಸಲಾಗಿದೆ.

ಎಲ್ಲ ಮಂಗಲಕಾರ್ಯಗಳ ಸಾರಥ್ಯವನ್ನು ವಹಿಸುವ, ಲೋಕಕ್ಕೆ ಮಂಗಲವನ್ನುಂಟು ಮಾಡುವ ಅರ್ಚರನ್ನು #ಮಂಗಲಸಾರಥಿ ಎಂದು ಗುರುತಿಸಿ, ಕೋರೋನಾದಂತಹ ಪ್ರತಿಕೂಲ ವಾತಾವರಣದಲ್ಲೂ, ಜನರು ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧಿಸಿದ್ದಾಗಲೂ ಅರ್ಚಕರು ದೇವರ ಅರ್ಚನೆಯಲ್ಲಿ ತೊಡಗಿದ್ದು ಮಹಾಮಾರಿಯಿಂದ ಜನತೆ ಸುರಕ್ಷಿರವಾಗಿರಲಿ ಎಂದು ನಿತ್ಯ ಪ್ರಾರ್ಥನೆ ಮಾಡಿದ ಅವರ ನಿಸ್ವಾರ್ಥ ಸೇವೆ, ಪರಿಶ್ರಮಕ್ಕೆ ಗೌರವ ಸಲ್ಲಿಸಲಾಯಿತು.

ದೊಡ್ಡಗಣಪತಿ ದೇವಸ್ಥಾನ, ನಾಡಿಗಲ್ಲಿ ಮಾರುತಿ ದೇವಸ್ಥಾನ, ಮಾರಿಗುಡಿಯ ಈಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ, ಆಂಜನೇಯ ದೇವಸ್ಥಾನ, ಉಮಾಮಹೇಶ್ವರ ದೇವಸ್ಥಾನ, ಸುಪ್ರಸನ್ನ ನಗರದ ಗಣಪತಿ ದೇವಸ್ಥಾನ, ವಿವೇಕಾನಂದ ನಗರದ ನಾಗಚೌಡೇಶ್ವರಿ, ಗಣಪತಿ, ಪ್ರಸನ್ನಾಂಜನೇಯ, ದೇವಸ್ಥಾನ, ಶಿವಾಜಿಚೌಕದ ಮಾರುತಿ, ಅಶ್ವತ್ಥ ನಾಗಾಂಜನೇಯ ದೇವಸ್ಥಾನ, ರಾಯರಪೇಟೆ ವೆಂಕಟೇಶ್ವರ ದೇವಸ್ಥಾನ, ಬಸೆಟ್ಟಿಕೆರೆಯ ಬಸವೇಶ್ವರ ದೇವಸ್ಥಾನ, ಯಡಳ್ಳಿಯ ಸೀತಾರಾಮಚಂದ್ರ ದೇವಸ್ಥಾನ, ಕೆಎಸ್ಸಾರ್ಟಿಸಿ ಡಿಪೊ ಗಣಪತಿ ದೇವಸ್ಥಾನ ಸೇರಿದಂತೆ ಮೂವತ್ತಕ್ಕೂ ಅಧಿಕ ದೇವಸ್ಥಾನಗಳ ಅರ್ಚಕರು ಭಾಗವಹಿಸಿ ಗೌರವಸನ್ಮಾನ ಸ್ವೀರಕಿಸಿದರು.

RELATED ARTICLES  ಪ್ರದೀಪ ನಾಯಕ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಜೆಡಿಎಸ್ ಸೇರಿದ ಯುವ ಪಡೆ.

ಅಧ್ಯಕ್ಷತೆ ವಹಿಸಿದ್ದ ವಿಂಗ್ ಕಮಾಂಡರ್(ನಿವೃತ್ತ) ಮುರಾರಿ ಭಟ್ ಅವರು ಮಾತನಾಡಿ – ಶ್ರೀರಾಮಕೃಷ್ಣ ಪರಮಹಂಸರು ಅರ್ಚಕರಾಗಿದ್ದವರು ದಿವ್ಯತೆಯ ಪರಾಕಾಷ್ಠೆಗೆ ತಲುಪಿದವರು‌‌. ದಕ್ಷಿಣೇಶ್ವರದಲ್ಲಿ ಕಾಳಿಯ ಅರ್ಚನೆಯ ಜವಾಬ್ದಾರಿ ಅವರಿಗೆ ಬಂದಮೇಲೆ ಸ್ವತಃ ಕಾಳಿಯನ್ನು ಕಂಡು, ಲೋಕಕ್ಕೆ ತೋರಿಸಿದವರು. ಕಾಳಿಮಾತೆಯಲ್ಲಿ ನಂಬಿಕೆ ಬರುವಂತೆ ಮಾಡಿದರು. ಅರ್ಚಕರು ಅಂದರೆ ನಂಬಿಕೆಯ ಸಂಕೇತ. ಮನುಷ್ಯರು ದೇವರಿಗೆ ಮಾಡುವ ಪೂಜೆ ಪುನಸ್ಕಾರಗಳಿಗೆ ಅರ್ಚಕರೇ ಮಾಧ್ಯಮ. ಅರ್ಚಕರು ಮನುಷ್ಯರ ಅಪೇಕ್ಷೆ, ಸುರಕ್ಷೆಗಳಿಗನುಗುಣವಾಗಿ ದೇವತಾ ಕಾರ್ಯಗಳನ್ನು ನೆರವೇರಿಸಿಕೊಂಡು ಜಗತ್ತಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಾರೆ. ರಾಮಕೃಷ್ಣ- ಶಾರದಾಮಾತೆ – ವಿವೇಕಾನಂದರ ಕ್ಷೇತ್ರದಲ್ಲಿ ಅರ್ಚಕರಿಗೆ ಗೌರವಸಲ್ಲಿಸಿದ್ದು ಅತ್ಯಂತ ಸೂಕ್ತ ಕಾರ್ಯ ಎಂದು ಯುವಾಬ್ರಿಗೇಡ್ ಕಾರ್ಯಯೋಜನೆಯನ್ನು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೆಎಸ್ಸಾರ್ಟಿಸಿ ಡಿಪೊ ಗಣಪತಿ ದೇವಸ್ಥಾನದ ಅರ್ಚಕ ಶ್ರೀ ರಾಜೇಶ್ ಭಟ್ ಅವರು ಮಾತನಾಡಿ, “ದೇವತಾಕಾರ್ಯಗಳೆಲ್ಲ ಮುಗಿದ ಮೇಲೆ ಅರ್ಚಕರನ್ನು ಕೇಳುವವರಿಲ್ಲ ಎಂಬ ಭಾವನೆ ಸಮಾಜದಲ್ಲಿದೆ, ನಿಷ್ಠೆ ಇಲ್ಲದೇ ಬರಿ ದುಡ್ಡು ಮಾಡುವವರು ಎಂಬ ಆಪಾದನೆ ಇದೆ, ಆದರೆ ಇಂತಹ ಆಪಾದನೆಯನ್ನು ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದ ಯುವಾಬ್ರಿಗೇಡ್ ತಂಡ ಇಂದು ತೊಡೆದುಹಾಕಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅರ್ಚಕರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತದೆ. ಸಮಾಜದ ಮುಖ್ಯವಾಹಿನಿಯಲ್ಲಿ ಶ್ರಮಿಸುವ ಎಲ್ಲರನ್ನೂ ಗುರುತಿಸುವ ಕಾರ್ಯ ಮಾಡಿಕೊಂಡು ಬಂದಿರುವ ಸಮಸ್ತ ಯುವಾಬ್ರಿಗೇಡ್ ಬಳಗಕ್ಕೆ ಸಮಸ್ತ ದೇವಾನುದೇವತೆಗಳು ಶ್ರೇಯಸ್ಸನ್ನುಂಟು ಮಾಡಲಿ” ಎಂದು ಹರಸಿದರು.

RELATED ARTICLES  ಮಾದಕ ವಸ್ತುಗಳ ದುಷ್ಪರಿಣಾಮದ ಅರಿವು ಬೆಳೆಸಿಕೊಳ್ಳಬೇಕು : ಶಾಸಕಿ ಶಾರದಾ ಶೆಟ್ಟಿ.

ಶ್ರೀ ರವಿ ಭಟ್ ಅವರು ಮಾತನಾಡಿ, ಶಿರಸಿಯ ಎಲ್ಲ ದೇವಸ್ಥಾನಗಳ ಅರ್ಚಕರು, ಲೋಕಕಲ್ಯಾಣಾರ್ಥವಾಗಿ ಯಜ್ಞಯಾಗಾದಿಗಳನ್ನು ಮಾಡಿದ ಪರಿಣಾಮ ಈ ಕೊರೋನ ಮಹಾಮಾರಿ ಶಿರಸಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಲಿಲ್ಲ. ಇವತ್ತು ನಮಗೆಲ್ಲ ಸಿಕ್ಕಿರುವ ಈ ಗೌರವ ನಾವುಗಳು ತಲೆತಲಾಂತರದಿಂದ ನಡೆಸಿಕೊಂಡು ಬಂದಿರುವ ದೇವತಾರಾಧನೆ ಹಾಗೂ ಪೂರ್ವಜನ್ಮಗಳ ಪುಣ್ಯದ ಫಲ. ಅರ್ಚಕರು ಜ್ಞಾನದ ಜ್ಯೋತಿಯಂತೆ ಪ್ರಕಾಶಿಸಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆಯನ್ನು ಕೊಡುತ್ತವೆ” ಎಂದರು.

ಪ್ರಾರಂಭದಲ್ಲಿ ಅರ್ಚಕವೃಂದವು ತಾಯಿ ಭಾರತಿಗೆ ಹಾಗೂ ದಿವ್ಯತ್ರಯರಿಗೆ ಆರತಿ ಬೆಳಗಿದರು‌. ಕೊನೆಯಲ್ಲಿ ನೆರೆದಿದ್ದ ಸರ್ವರಿಗೂ ಮಂತ್ರಘೋಷದೊಂದಿಗೆ ಮಂತ್ರಾಕ್ಷತೆ ಅನುಗ್ರಹಿಸಿದರು‌.

ರಾಮಕೃಷ್ಣ ಸ್ಟೂಡೆಂಟ್ ಹೋಮ್‌ನ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು‌. ಶಿಶಿರ ಅಂಗಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಹರೀಶ್ ಧೂಳಳ್ಳಿ ಸ್ವಾಗತಿಸಿದರು‌. ಮಂಗೇಶ್ ವಂದನಾರ್ಪಣೆ ಮಾಡಿದರು. ಕುಮಾರ್ ಜಿ.ಪಿ. ಉಪಸ್ಥಿತರಿದ್ದರು