ಅಂಕೋಲಾ: ಒಮ್ಮೊಮ್ಮೆ ವಿಧಿ ಎಷ್ಟು ಕ್ರೂರಿ ಎನಿಸಿಬಿಡುತ್ತದೆ. ವಿಧಿಗೆ ಚಿಕ್ಕ ಮಕ್ಕಳು ಹಿರಿಯರು ಯುವಕರು ಎನ್ನುವ ಭೇದಭಾವ ಇಲ್ಲ ಆಯಸ್ಸು ತಿಳಿದವರು ಇಹಲೋಕ ತ್ಯಜಿಸಬೇಕು ಎನ್ನುವ ಮಾತಿದೆ. ಆದರೆ ಅಂಕೋಲ ತಾಲೂಕಿನಲ್ಲಿ ನಡೆದಿರುವ ಘಟನೆಯೊಂದು ಎಲ್ಲರ ಕಣ್ಣಲ್ಲಿ ನೀರು ಬರಿಸುವಂತಹದ್ದು. ಪಟ್ಟಣದ ರಥ ಬೀದಿಯ ಪಕ್ಕದ ಮನೆಯೊಂದರಲ್ಲಿ ಆಡಿ ಹಾಡಿ ಎಲ್ಲರನ್ನೂ ಸಂತೋಷವಾಗಿ ಇಡುತ್ತಿದ್ದ ಪುಟ್ಟ ಕಂದಮ್ಮ ಉಸಿರು ಚೆಲ್ಲಿದೆ. ಮನೆಯಲ್ಲಿ ಆಟ ಆಡುತ್ತಿದ್ದ ಈ ಪುಟ್ಟ ಕಂದಮ್ಮ ಮನೆಯ ಬಾತ್ ರೂಂಮಿನಲ್ಲಿದ್ದ ನೀರಿನ ಬಕೆಟ್ ಒಳಗೆ ತಲೆಕೆಳಗಾಗಿ ಬಿದ್ದು ಮೃತ ಪಟ್ಟಿದೆ. ಪುಟ್ಟ ಮಗುವನ್ನು ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ ಬದುಕಿ ಬಾಳಬೇಕಾಗಿದ್ದ ಪುಟ್ಟ ಕಂದಮ್ಮ ಅಸಹಜವಾಗಿ ಇಹಲೋಕ ತ್ಯಜಿಸಿರುವುದು ಬೇಸರದ ಸಂಗತಿ.
ತಾಯಿ ಬಾತ್ ರೂಂಮ್ ನಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ,ಫೋನ್ ರಿಂಗಣಿಸಿದ ಸದ್ದು ಕೇಳಿ , ಫೋನ ಕರೆಗೆ ಉತ್ತರಿಸಲು ಬಾತರೂಂ ಬಿಟ್ಟು ಫೋನ್ ಇಟ್ಟಿದ್ದ ಪಕ್ಕದ ಕೋಣೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅಚಾತುರ್ಯ ನಡೆದು ಹೋಗಿದೆ. ತಾಯಿಯ ಗಮನಕ್ಕಿಲ್ಲದೇ ಪುಟಾಣಿ ಮಗು ತನ್ನ ತಾಯಿಯನ್ನು ಹುಡುಕಿಕೊಂಡು ಇಲ್ಲವೇ ಆಟ ಆಡುತ್ತ ಬಾತರೂಂಮಿಗೆ ಹೋಗಿ , ಅಲ್ಲಿನ ನೀರಿನ ಬಕೆಟ್ ನಲ್ಲಿ ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.
ತಾಯಿ ಪಟ್ಟಣದ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಹಾಗೂ ಅಜ್ಜಿಯ ಜೊತೆಗೆ ಮಗು ಇತ್ತು, ಆದರೆ ಅರೆ ಕ್ಷಣದಲ್ಲಿ ಈ ಘಟನೆ ನಡೆದಿದ್ದು, ತಾಯಿಯ ಆಕೃಂದನ ಎಂತವರ ಕರುಳು ಕಿತ್ತುಬರುವಂತಿತ್ತು. ಅನಾಹುತ ಗಮನಕ್ಕೆ ಬರುತ್ತಲೇ ಮಗುವಿನ ತಾಯಿ ಮತ್ತಿತರರು ಮಗುವನ್ನೆತ್ತಿಕೊಂಡು ತಾಲೂಕಾ ಆಸ್ಪತ್ರೆಗೆ ಕರೆತಂದರಾದರೂ , ಆಸ್ಪತ್ರೆಗೆ ತರುವ ಮುನ್ನವೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು