ಕಾರವಾರ: ಸ್ಫೋಟಕ ವಸ್ತುಗಳನ್ನ ಯಾವುದೇ ಸುರಕ್ಷತೆ ವಹಿಸದೇ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ನಗರ ಠಾಣೆ ಪಿಎಸ್‌ಐ ಸಂತೋಷ್ ಕುಮಾರ್ ನೇತೃತ್ವದಲ್ಲಿ ನಗರದ ಲಂಡನ್ ಬ್ರಿಡ್ಜ್ ಬಳಿ ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿ ಬಾಲು ಮುರುಗನ್ ಹಾಗೂ ಆನಂದ ನಾಯ್ಕ ಎನ್ನುವ ಇಬ್ಬರನ್ನ ಬಂಧಿಸಿರುವ ಬಗ್ಗೆ ವರದಿಗಳು ತಿಳಿಸಿದೆ.
ಬಂಧಿತ ಆರೋಪಿತರು ಸುಮಾರು 125 ಗ್ರಾಂ ಹಾಗೂ 25 ಗಾತ್ರದ 84 ಜಿಲೆಟಿನ್ ಕಡ್ಡಿಗಳನ್ನ ಹಾಗೂ 4 ಇಲೆಕ್ಟಿಕಲ್ ಡಿಟೋನೇಟರ್ ಗಳನ್ನ ಅಂಕೋಲಾದಿಂದ ಕಾರವಾರ ಕಡೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಐಆರ್.ಬಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ಬಿಣಗಾದಿಂದ ನಗರಕ್ಕೆ ಪ್ರವೇಶ ಮಾಡುವ ಟನಲ್ ನಿರ್ಮಾಣ ಕಾಮಗಾರಿಗೆ ಸ್ಫೋಟ ಮಾಡಲು ಸ್ಫೋಟಕ ವಸ್ತುಗಳನ್ನ ಸಾಗಿಸುತ್ತಿದ್ದರು ಎನ್ನಲಾಗಿದೆ. ಯಾವುದೇ ಸ್ಫೋಟಕ ವಸ್ತುಗಳು ಸಾಗಾಟ ಮಾಡಬೇಕಾದರೆ ಸುರಕ್ಷಿತ ಕ್ರಮ ಕೈಗೊಂಡು ನಿಗಧಿ ಮಾಡಿದ ವಾಹನದಲ್ಲೇ ಸಾಗಿಸಬೇಕು. ಆದರೆ ಆರೋಪಿತರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಸಾರ್ವಜನಿಕ ಜೀವ ಹಾಗೂ ಆಸ್ತಿ ಹಾನಿ ಮಾಡುವ ರೀತಿಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ವಿಚಾರ ಗಮನಕ್ಕೆ ಬಂದಿದ್ದು ತಕ್ಷಣ ಪೊಲೀಸರು ನಡೆಸಿ ಆರೋಪಿತರನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.