ಕಾರವಾರ:ಕಣಸಗಿರಿ ಬಂದರವಾಡದಲ್ಲಿರುವ ದರ್ಗಾಕ್ಕೆ ಕಿಡಿಗೇಡಿಗಳು ಕೆಲ ದಿನಗಳ ಹಿಂದೆ ಪ್ರವೇಶ ಮಾಡಿ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗುವಂತೆ ಮಾಡಿದ್ದ ಆರೋಪಿಗಳಾದ ಮಹೇಂದ್ರ ಮಂಗೇಶ್ ರಾಣಿ ,ವಿನಾಯಕ್ ಕಾಶಿನಾಥ್ ಸಾವಂತ್ ಹಾಗೂ ಮುರಳಿಧರ್ ದೇವರಾಜ್ ಗೋವೇಕರ್ ಈ ಮೂವರು ಆರೋಪಿಗಳ ಬಂಧನದ ಜೊತೆಗೆ ಕೃತ್ಯಕ್ಕೆ ಬಳಸಿದ 2 ಸುತ್ತಿಗೆ, ಒಂದು ಕಾರ್ ಹಾಗೂ ಒಂದು ಮೋಟಾರ ಸೈಕಲ್‌ನ್ನು ಆರೋಪಿತರಿಂದ ವಶಕ್ಕೆ ಪಡೆಯುವಲ್ಲಿ ಚಿತ್ತಾಕುಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತರು ದರ್ಗಾಕ್ಕೆ ಪ್ರವೇಶಿಸಿ ಹಸಿರು ಬಾವುಟಕ್ಕೆ ಬೆಂಕಿ ಹಚ್ಚಿ ಭಾಗಶಃ ಸುಡುವಂತೆ ಮಾಡಿ, ದರ್ಗಾದ ಗೋಡೆಗಳನ್ನು ಕೆಡವಿ ಹಾಗೂ ಕಬ್ಬಿಣದ ಗ್ರಿಲ್ ಮತ್ತು ಗೇಟನ್ನು ಭಾಗಶಃ ಹಾಳು ಮಾಡಿ ದರ್ಗಾದ ಮಜರ್ (ಹಿರಿಯರ ಸಮಾದಿ) ಯನ್ನು ಒಡೆದು ಹಾಕಿ ಅದರ ಮೇಲೆ ಹೊದಿಸಿದ ಹಸಿರು ಗಲೀಪನ್ನು ತೆಗೆದು ಬಿಸಾಕಿದ್ದು ಈ ಕುರಿತು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣದ ಆರೋಪಿಗಳ ಪತ್ತೆಗೆ ಎಸ್.ಪಿ ಸುಮನ್ ಪೆನ್ನೇಕರ್ ಇವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಪೊಲೀಸ್ ವೃತ್ತ ನಿರೀಕ್ಷಕರ ನೇತ್ರತ್ವದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿತರನ್ನು ಪತ್ತೆ ಹಚ್ಚಲು ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪೊಲೀಸ್ ವರಿಷ್ಟಧಿಕಾರಿ ಸುಮನ್ ಪೆನ್ನೇಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.