ಹಿರೇಗುತ್ತಿ: “ನಿರಂತರ ಓದು ಮತ್ತು ಕ್ರೀಯಾಶೀಲತೆಯಿಂದ ಮಾತ್ರ ಸಾಧನೆ ಸಾಧ್ಯ ಅದೃಷ್ಟ, ತಾಳ್ಮೆ, ಬುದ್ಧಿ, ಆತ್ಮಶಕ್ತಿಗಳಿಂದ ಯಶಸ್ಸಿನ ಬಾಗಿಲನ್ನು ತೆರೆಯಲು ಸಾಧ್ಯ. ಹಿರೇಗುತ್ತಿಯ ಪ್ರತಿಭಾ ಸಂಪನ್ನ ಮಕ್ಕಳಾಗಿ ಊರಿಗೂ ಶಾಲೆಗೂ ಸತ್ಕೀರ್ತಿ ತರಬೇಕೆಂದು” ಪ್ರಸನ್ನ ಭಟ್ಟ ಉಪನ್ಯಾಸಕರು ವಿಶ್ವದರ್ಶನ ಬಿ.ಎಡ್ ಕಾಲೇಜ್ ಯಲ್ಲಾಪುರ ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಭಿಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. “ಪೆಟ್ಟು ತಿಂದ ಶಿಲೆ ದೇವರ ಮೂರ್ತಿಯಾಗುವಂತೆ ಕಷ್ಟಪಟ್ಟ ವಿದ್ಯಾರ್ಥಿ ಸಮಾಜದಿಂದ ಗೌರವಾರ್ಹ ನಾಗರಿಕನಾಗಿ ಪುರಸ್ಕರಿಸಲ್ಪಡುತ್ತಾನೆ. ಸ್ವ ಅಧ್ಯಯನಕ್ಕೆ ಇಂದು ಸಾಕಷ್ಟು ಅವಕಾಶವಿದೆ ಸಿಕ್ಕಿದ ಅವಕಾಶ ಕಳೆದುಕೊಳ್ಳುವುದು ಜಾಣತನವಲ್ಲ” ಎಂದರು.
ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ “ಗುರಿಯ ಸಫಲತೆಯಲ್ಲಿ ಅವಿರತ್ನ ಮುಖ್ಯ. ವಿದ್ಯಾರ್ಥಿ ಜೀವನದಿಂದಲೇ ಸಮಾಜದಲ್ಲಿನ ಸತ್ಕಾರ್ಯದಲ್ಲಿ ಪಾಲ್ಗೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು” ಎಂದರು.
ಶಿಕ್ಷಕ ಎನ್.ರಾಮು ಹಿರೇಗುತ್ತಿ ಪ್ರಾಸ್ತಾವಿಕ ಮಾತನಾಡಿ “ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ವೃದ್ಧಿಸಲು, ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಅಭಿಪ್ರೇರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ವೇದಿಕೆಯಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ಮಹಾದೇವ ಗೌಡ ಸರ್ವರನ್ನೂ ಸ್ವಾಗತಿಸಿ ವಂದಿಸಿದರು.
ವರದಿ: ಎನ್ ರಾಮು ಹಿರೇಗುತ್ತಿ