ಶಿರಸಿ: ಟಿ.ಎಸ್.ಎಸ್. ಶಿರಸಿ ಹಾಗೂ ಉಪ್ಪಿ ಎಂಟರ್ಟೈನರ್ ಇವರ ಸಹಭಾಗಿತ್ವದಲ್ಲಿ ಅಡಿಕೆ ಬೆಳೆಗಾರರ ಜೀವನ ಚಿತ್ರಣವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣಗೊಂಡಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಲನಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮ ಹಾಗೂ ಚಾಲಿ ಅಡಿಕೆ ಸುಲಿಯುವ ಸ್ಪರ್ಧೆ ಫೆ.20 ರಂದು ಟಿ.ಎಸ್.ಎಸ್. ಆವಾರದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಸುಮಾರು 100 ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಮೊದಲನೇ ಸ್ಥಾನದ ವಿಜೇತರಾಗಿ ಮಮತಾ ನಾಗರಾಜ ಚೆನ್ನಯ್ಯ ಮಾಸ್ತಿಬೈಲ್ ಹಾಗೂ ಎರಡನೇ ಸ್ಥಾನದ ವಿಜೇತರಾಗಿ ಲಲಿತಾ ನಾಗೇಶ ಬಾಂದೇಕರ ತೆರಕನಹಳ್ಳಿ ಇವರು ಆಯ್ಕೆಯಾದರು. ವಿಜೇತರಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಲನಚಿತ್ರದ ನಾಯಕ ನಟಿ ಹಾಗೂ “ಕನ್ನಡತಿ” ಧಾರಾವಾಹಿಯ ನಾಯಕ ನಟಿ ರಂಜನಿ ರಾಘವನ್ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಚಲನಚಿತ್ರದ ನಿರ್ದೇಶಕರಾದ ವಿನಾಯಕ ಕೋಡ್ಸರ, ಚಲನಚಿತ್ರದ ನಿರ್ಮಾಪಕರಾದ ಬಿ.ಜಿ. ಮಂಜುನಾಥ, ಚಲನಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ರವೀಂದ್ರ ಜೋಶಿ, ಸಂಘದ ಪ್ರಧಾನ ವ್ಯವಸ್ಥಾಪಕರಾದ ರವೀಶ ಅ. ಹೆಗಡೆ, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.