ಯಲ್ಲಾಪುರ : ಕಳೆದ ಜುಲೈನಲ್ಲಿ ಭೂಕುಸಿತವಾಗಿದ್ದ ಕಳಚೆ ಗ್ರಾಮದಲ್ಲಿ ಈಗ ಮತ್ತೆ ಗುಡ್ಡ ಕುಸಿದಿದೆ. ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆಯಲ್ಲಿ ಜುಲೈ 22, 23ರಂದು ಭಾರಿ ಪ್ರಮಾಣದಲ್ಲಿ ಬೆಟ್ಟ, ಗುಡ್ಡ ಕುಸಿದಿದ್ದವು. ಊರಿನ ಚಿತ್ರಣವೇ ಬದಲಾಗಿತ್ತು. ಅಂದು ಪ್ರವಾಹ ಕಂಡಿದ್ದ ಗ್ರಾಮದಲ್ಲಿ ಈಗ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ರೈತರೊಬ್ಬರು ಸಣ್ಣ ಕೆರೆಯಲ್ಲಿ ನೀರು ಸಂಗ್ರಹಿಸಿದ್ದರು. ಆ ಪ್ರದೇಶ 30-40 ಅಡಿಕೆ ಮರಗಳೊಂದಿಗೆ ಹಳ್ಳಕ್ಕೆ ಜಾರಿದೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಇಡೀ ಗ್ರಾಮ ಸ್ಥಳಾಂತರಿಸಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಆ ನಂತರದ ಬೆಳವಣಿಗೆಗಳ ಮಾಹಿತಿಯಿಲ್ಲ.
ಇಲ್ಲಿ ಪ್ರಕೃತಿ ವಿಕೋಪಕ್ಕೂ ಮೊದಲು, ನೈಸರ್ಗಿಕವಾಗಿ ಸಿಗುತ್ತಿದ್ದ ನೀರನ್ನೇ ಮನೆಗಳಲ್ಲಿ ಬಳಸಲಾಗುತ್ತಿತ್ತು. ಈಗ ಅಂಥ ಬಹುತೇಕ ಜಲಮೂಲಗಳು ನಾಶವಾಗಿವೆ. ಗುಡ್ಡಗಳೇ ಕೊಚ್ಚಿಕೊಂಡು ಹೋಗಿದ್ದು ಮತ್ತು ನೀರಿನ ಹರಿವು ಬದಲಾದ್ದರಿಂದ ಹಳ್ಳಗಳು ಒಣಗಿವೆ. ಕಳಚೆಯ ಒಂದು ಭಾಗದಲ್ಲಿ ಕೆಲವರು ತಲಾ 10 ಸಾವಿರ ಖರ್ಚು ಮಾಡಿ ಪೈಪ್‌ಲೈನ್ ಅಳವಡಿಸಿಕೊಂಡಿದ್ದಾರೆ. ಮತ್ತೊಂದು ಕಡೆಗೆ ಅದೂ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಕೆಲವರು ಊರು ಬಿಟ್ಟು ಯಲ್ಲಾಪುರದಲ್ಲಿ ವಾಸವಿದ್ದಾರೆ.