ಅಂಕೋಲಾ : ತಂದೆ ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ತಂದೆಯ ಸಾವಿನ ನಂತರ ತಂದೆಯ ಅಂತ್ಯ ಸಂಸ್ಕಾರ ಮಾಡುವುದು ಪುತ್ರರ ಕರ್ತವ್ಯವಾಗಿರುತ್ತದೆ. ಆದರೆ ಗಂಡು ಮಕ್ಕಳು ಇಲ್ಲದ ಸಂದರ್ಭದಲ್ಲಿ ಪುತ್ರಿಯರು ಅಂತ್ಯ ಸಂಸ್ಕಾರ ಮಾಡುವುದು ಕಡಿಮೆ. ಆದರೆ ಅಂತಹ ಅಪರೂಪದ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಮಂಜಗುಣಿಯ ಪಾಂಡುರಂಗ ಶಾಂತಾ ನಾಯ್ಕ ಹೃದಯಾಘಾತದಿಂದ ಮೃತಪಟ್ಟಿದ್ದು, ತಂದೆಯ ಅಂತ್ಯಕ್ರಿಯೆಯನ್ನು ಪುತ್ರಿಯರೇ ನೆರವೇರಿಸಿದ್ದಾರೆ.
ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಸಾಗಿಸುತ್ತಿರುವಾಗ ಪಾಂಡುರಂಗ ನಾಯ್ಕ ಕೊನೆಯುಸಿರೆಳೆದಿದ್ದಾರೆ. ಪಾಂಡುರಂಗ ನಾಯ್ಕ ಕಸ್ಟಮ್ ಇನ್ಸೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು, ವರ್ಷದ ಹಿಂದಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದರು. ಪಟ್ಟಣದ ಅಂಬಾರಕೊಡ್ಡದಲ್ಲಿ ವಾಸವಾಗಿದ್ದ ಇವರಿಗೆ ಪತ್ನಿ ದುರ್ಗಾವತಿ, ಪುತ್ರಿಯರಾದ ಕೃಪಾ, ಕೃತಿ ಸೇರಿದಂತೆ ಅಪಾರ ಬಂಧು-ಬಳಗವಿದೆ. ಸ್ವಗ್ರಾಮ ಮಂಜಗುಣಿಯಲ್ಲಿ ಅಂತ್ಯಕ್ರಿಯೆ ಇವರಿಗೆ ನಡೆಸಿದ್ದು, ಗಂಡು ಮಕ್ಕಳು ಇಲ್ಲದಿರುವುದರಿಂದ ಹೆಣ್ಣುಮಕ್ಕಳಿಂದಲೇ ಅಂತ್ಯಕ್ರಿಯೆ ನಡೆಸಿದ್ದಾರೆ.