ಅಂಕೋಲಾ : ಭಾರತ ದೇಶದಲ್ಲೇ ಮೊಟ್ಟ ಮೊದಲು ಬ್ರಿಟಿಷರನ್ನು ಹೊರದಬ್ಬಿ ಅವರ ಧ್ವಜ ಇಳಿಸಿ ಸ್ವಾತಂತ್ರ್ಯ ಘೋಷಿಸಿದ ಸೋದೆ ಸದಾಶಿವರಾಯರ ಸಾಹಸಗಾಥೆಯ ಸ್ಮರಣೆಯ ವಿಜಯ ದಿವಸವನ್ನು ನಂದವಾಳ, ಕಡವಾಡದಲ್ಲಿ ಇಂದು ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ದೀಪ್ತಿ ಅರಗೇಕರರವರು ದೇಶ ಭಕ್ತಿಗೀತೆಯಾದ ” ವಂದೇ ಮಾತರಂ ” ಹಾಗು ಸೈನಿಕ ಗೀತೆಯಾದ “ಯೇ ಮೇರೇ ವತನ್ ಕೇ ಲೋಗೋ ” ಗೀತೆಯನ್ನು ಹಾಡಿ ನೆರೆದ ಸಾರ್ವಜನಿಕರನ್ನು ಭಾವುಕರನ್ನಾಗಿಸಿದರು. ಸುಭಾಷ ಗುನಗಿಯವರು ಪ್ರಾಸ್ತಾವಿಕ ನುಡಿ ಗಳನ್ನಾಡಿದರು ಹಾಗೆಯೇ ವೇದಿಕೆ ಮೇಲೆ ಉಪಸ್ಥಿತರಾದ ಗಣ್ಯರನ್ನು ಆತ್ಮೀಯರಾಗಿ ಸ್ವಾಗತಿಸಿದರು.ನಂತರ ಇತಿಹಾಸಕಾರರು ಹಾಗು ಪ್ರಾಚಾರ್ಯರು ಆದ ಶ್ರೀ ಲಕ್ಷ್ಮೀಶ ಹೆಗಡೆಯವರು ಸೋದೆ ಸದಾಶಿವರಾಯರ ಸಾಹಸದ ಯಶೋಗಾಥೆ ಹಾಗು ಕಾರವಾರದ ಹೆಮ್ಮೆಯ ಸುಪುತ್ರ ಶ್ರೀ ಹೆಂಜಾ ನಾಯ್ಕರವರ ಚರಿತ್ರೆಯನ್ನು ಬಣ್ಣಿಸಿದರು.
ಕಾರ್ಯಕ್ರಮದ ಮಧ್ಯದಲ್ಲಿ ಪದ್ಮಶ್ರೀ ತುಳಸಿ ಗೌಡ, ಇತಿಹಾಸಕಾರರು ಆದ ಲಕ್ಷ್ಮೀಶ ಹೆಗಡೆ ಹಾಗು ಸ್ತಳದಾನ ಮಾಡಿದ ಶ್ರೀ ಸುಧಾಕರ ನಾಯ್ಕ ಹಾಗು ಕಡವಾಡದ ರೈತರು ಹಾಗು ಇತರರಿಗೆ ಫಲ ಪುಷ್ಪ ನೀಡಿ ಸನ್ಮಾನ ಮಾಡಲಾಯಿತು. ಸಮಾಜ ಕಲ್ಯಾಣ ಹಾಗು ಹಿಂದುಳಿದ ವರ್ಗದ ಸಚಿವರು ಹಾಗು ಉ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ಕಡವಾಡ ಗ್ರಾಮ ಹಾಗು ಕಾರವಾರದ ಇತಿಹಾಸವನ್ನು ಬಣ್ಣಿಸಿದರು.ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ ರವರು ಮಾತನಾಡಿ ಕಡವಾಡದ ನಂದವಾಳದ ಪವಿತ್ರ ಜಾಗೆಯ ಬಗ್ಗೆ ಗೌರವ ವ್ಯಕ್ತಪಡಿಸಿದರು ಹಾಗೆಯೇ ಈ ವಿಜಯ ದಿವಸ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಆಚರಿಸಿ, ಇದನ್ನು ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಆಚರಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸಿದರು.
ವೇದಿಕೆಯಲ್ಲಿ ಪದ್ಮಶ್ರೀ ವಿಜೇತ ತುಳಸಿ ಗೌಡ, ವಿ.ಪ.ಸದಸ್ಯರಾದ ಗಣಪತಿ ಉಳವೇಕರ, ಕಾರವಾರ ನಗರಸಭಾ ಅಧ್ಯಕ್ಷ ನಿತಿನ್ ಪಿಕಳೆ, ನಾಗೇಶ ಕುರ್ಡೇಕರ, ಸಂಜಯ ನಾಯ್ಕ , ರಾಜೇಂದ್ರ ನಾಯ್ಕ, ಪ್ರಿಯಾ ಗೌಡ, ದಿಲೀಪ ನಾಯ್ಕ,ಸ್ಥಳ ದಾನಿಗಳಾದ ಸುಧಾಕರ ನಾಯ್ಕ, ಮನೋಜ ಭಟ್ಟ , ದಿಲೀಪ ನಾಯ್ಕ , ಉಷಾ ಹೆಗಡೆ ,ಉದಯ ಬಶೆಟ್ಟಿ,ಪ್ರಶಾಂತ ನಾಯಕ , ಶಾಂತಲಾ ನಾಡಕರ್ಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಗೇಶ ಮಿರ್ಜಾನ ನಿರೂಪಣೆ ಮಾಡಿದರು.ವಿವಿಧ ಸಂಘಗಳ ಪಧಾಧಿಕಾರಿಗಳು,ಕಾರ್ಯಕರ್ತರು, ಹಿರಿಯರು ಹಾಗು ಹೆಚ್ಚಿನ ಸಂಖ್ಯೆ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ
ರಾಷ್ಟ್ರಗೀತೆ ಹಾಡಲಾಯಿತು.