ಶಿರಸಿ: ಕಳೆದ‌ ಮೂವತ್ಮೂರು ವರ್ಷಗಳಿಂದ ಕಿವುಡ ಹಾಗೂ‌ ಮೂಕ ಮಕ್ಕಳ ಶಿಕ್ಷಣಕ್ಕೋಸ್ಕರ ಕೆಲಸ‌ ಮಾಡುತ್ತಿರುವ ಜಿಲ್ಲೆಯ ಪ್ರಪ್ರಥಮ ಇಲ್ಲಿನ ‌ಬನವಾಸಿ ರಸ್ತೆಯ ಮಹದೇವ ಭಟ್ ಕೂರ್ಸೆ ಕಿವುಡ ಹಾಗೂ‌ ಮೂಕ‌ ಮಕ್ಕಳ ಶಾಲೆಗೆ ಸೌರ ಶಕ್ತಿಯ ಬೆಳಕಿನ ಸ್ಪರ್ಷ ಸಿಕ್ಕಿದೆ. ಪ್ರತಿಭಾವಂತ ವಿಶೇಷ ಚೇತನ ಮಕ್ಕಳಿಗೆ ಅಕ್ಷರಶಃ ಬೆಳಕು‌ ಹಾಗೂ ಬೆಳಕಿನ ಶಕ್ತಿ ಬಳಕೆಗೆ ಲಭ್ಯವಾಗಿದೆ.

ಏನಿದು ಬೆಳಕು ಹಾಗೂ ಶಕ್ತಿ?:
ಸೆಲ್ಕೋ ಫೌಂಡೇಶನ್ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆ ಈ ವಿಶಿಷ್ಟ ನೆರವಿನ ಕಾರ್ಯಕ್ಕೆ ಹೆಗಲು ನೀಡಿದೆ.
ಸೆಲ್ಕೋ ತನ್ನ‌ ಸಾಮಾಜಿಕ ಬದ್ದತೆಯ ಭಾಗವಾಗಿ ೩.೫೦ ಲ.ರೂ‌. ಮೊತ್ತದಲ್ಲಿ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದ ಮಹದೇವ ಭಟ್ಟ ಸಂಸ್ಥೆಗೆ ಸಂಪೂರ್ಣ ಉಚಿತವಾಗಿ ಬೆಳಕಿನ ಶಕ್ತಿ ನೀಡಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ‌‌ ಸಮಸ್ಯೆಯಲ್ಲಿ ಬಳಲುತ್ತಿದ್ದ ಮಹದೇವ ಭಟ್ಟ ಕೂರ್ಸೆ ಶಾಲೆಯ ಹಾಗೂ ವಸತಿ ನಿಲಯದ ಪವರ್ ಪ್ರಾಬ್ಲಂ ಬಗೆಹರಿದಿದೆ.

ಏನಿದು ಸಂಸ್ಥೆ?:
ಮೂರು ದಶಕಗಳ ಹಿಂದೆ ಆರ್‌.ಎ.ಹೆಗಡೆ, ಭೂಮಾ ವಕೀಲರು, ಡಾ. ಎ.ಎನ್.ಪಟವರ್ಧನ್, ಆರ್.ಜಿ.ರಾಯ್ಕರ, ಡಾ. ಟಿ.ನಾರಾಯಣ ಭಟ್ಟ ಇತರರು ಸೇರಿ ಸ್ಥಾಪಿಸಿದ ವಿಶೇಷ ಮಕ್ಕಳ ವಿಶೇಷ ಇದು. ಈ ಶಾಲೆಗೆ ಸರಕಾರದ ಅನುದಾನದ ಲಭ್ಯತೆಯ ವಿಳಂಬ ಹಾಗೂ ಕಡಿಮೆ ಮೊತ್ತದ ನೆರವಿನ ನಡುವೆಯೂ ದಾನಿಗಳಿಂದ ಸಂಸ್ಥೆ ನಡೆಯುತ್ತಿದೆ.
ಕಿವುಡ ಹಾಗೂ‌ ಮೂಕ ಮಕ್ಕಳನ್ನೂ ಮುಖ್ಯ ವಾಹಿನಿಗೆ ತರಬೇಕು ಎನ್ನುವ‌ ಮಹತ್ವಾಕಾಂಕ್ಷಿ ಕನಸು ಹಾಗೂ‌ ಮೂಲ ಆಶಯ ಈ‌ ಸಂಸ್ಥೆಯದ್ದಾಗಿದೆ.

RELATED ARTICLES  ಕುಮಟಾ ಸಮೀಪ ಭೀಕರ ಅಪಘಾತ: ಹಾರಿಹೋಯ್ತು ಬೈಕ್ ಸವಾರನ ಪ್ರಾಣ..!!!

ಸಮಸ್ಯೆ ಆಗುತ್ತಿತ್ತು…
ಬಾಗಲಕೋಟೆ, ಗಂಗಾವತಿ, ಕುಮಟಾ, ಹೊನ್ನಾವರ, ಹಾವೇರಿ ಸೇರಿದಂತೆ ವಿವಿಧಡೆಯಿಂದ ಒಂದರಿಂದ ಹತ್ತನೇ ತರಗತಿಯ ತನಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದು ವಸತಿ ಸಹಿತ ಶಾಲೆ ಆಗಿದ್ದು, ಹೆಸ್ಕಾಂ ವಿದ್ಯುತ್ ಕೈ ಕೊಟ್ಟರೆ ಮಕ್ಕಳಿಗೆ ಊಟ ನೀಡುವದೂ ಕಷ್ಟ ಆಗುತ್ತಿತ್ತು. ರಾತ್ರಿ ವೇಳೆ ಕತ್ತಲೂ ಆಗುತ್ತಿತ್ತು. ಅವರ ಓದಿಗೂ ಕಷ್ಟವಾಗುತ್ತಿತ್ತು.

ಇದನ್ನು ಗಮನಿಸಿದ ಸೆಲ್ಕೋ‌ ಇಂಡಿಯಾದ ಸಿಇಓ‌ ಮೋಹನ ಭಾಸ್ಕರ ಹೆಗಡೆ ಅವರು ಸೆಲ್ಕೋ ಸಂಸ್ಥಾಪಕ, ಮ್ಯಾಗಸ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ ಡಾ. ಹರೀಶ್ ಹಂಡೆಯವರ ಗಮನಕ್ಕೆ ತಂದು, ಸೆಲ್ಕೋ ಫೌಂಡೇಶನ್ ಸಂಸ್ಥೆಯ‌ ಮೂಲಕ ಸೌರ ಶಕ್ತಿ ಒದಗಿಸಿ ಮಾತೃತ್ವ ಮೆರೆದಿದ್ದಾರೆ. ಸೆಲ್ಕೋ ಶಿರಸಿ ಶಾಖೆಯ ಅಧಿಕಾರಿಗಳು ೫ ಕಿಲೋವ್ಯಾಟ್ ಸಾಮರ್ಥ್ಯದ ಉಪಕರಣಗಳನ್ನು ಅಳವಡಿಸಿದ್ದಾರೆ. ಈ ಬೆಳಕಿ‌ನ ಶಕ್ತಿಗೆ ಹದಿನಾರು ಪ್ಯಾನಲ್ ಜೋಡಿಸಲಾಗಿದೆ.
ಗ್ರಾಇಂಡರ್, ಮಿಕ್ಸರ್, ಹಾಗೂ ೨೫-೩೦ ಕ್ಕೂ ಅಧಿಕ ಬಲ್ಬು, ೧೫ಕ್ಕೂ ಹೆಚ್ಚು ಪ್ಯಾನ್ ಏಕಕಾಲಕ್ಕೆ ಓಡಿಸಬಹುದು. ಈಗ ವಿದ್ಯುತ್ ಉತ್ಪಾದನೆ ಮಾಡಿ‌ ಸ್ವತಃ ಶಾಲೆಯಲ್ಲಿ ಬಳಕೆ‌ ಮಾಡಲಾಗುತ್ತಿದೆ. ಸೆಲ್ಕೋ ಅಕ್ಷರಶ: ಅಕ್ಷರದ ಬೆಳಕಿಗೆ ಬೆಳಕನ್ನೇ ನೀಡಿದೆ, ನೀಡುತ್ತಿದೆ.

RELATED ARTICLES  ದಿನಕರ‌ ಶೆಟ್ಟಿಯವರ ಪರ‌ ಪ್ರಚಾರ ಬಿರುಸು: ಕಮಲ ಪಾಳಯದಲ್ಲಿ ಉತ್ಸಾಹ

ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಯ ಅಗತ್ಯಕ್ಕೆ ಸ್ಪಂದಿಸುವ ಅವಕಾಶ ಒದಗಿದ್ದು ಪ್ರಯತ್ನಿಸಿದ್ದೇವೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ದೀರ್ಘಕಾಲ ಪ್ರಯೋಜನ ನೀಡುತ್ತದೆ. ಹಾಗಾಗಿ, ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಸಿ, ಸಮರ್ಪಕವಾಗಿ ನಿರ್ವಹಿಸಬೇಕು. ಅದಾಗದಿದ್ದರೆ ಈ ಪರಿಸರ ಸ್ನೇಹಿ ಉದ್ಯಮದ ಮೇಲೆ ಅವಿಶ್ವಾಸ ಮೂಡುತ್ತದೆ. ಅದಾಗಬಾರದು. ಸೌರಶಕ್ತಿ ನಮ್ಮ ದೇಶದ ಭವಿಷ್ಯದ ಹಾಗೂ ಭರವಸೆಯ ಶಕ್ತಿ.
-ಮೋಹನ ಭಾಸ್ಕರ ಹೆಗಡೆ, ಸಿಇಓ ಸೆಲ್ಕೋ ಸೋಲಾರ್

ಸೆಲ್ಕೋ ಸಂಸ್ಥೆಯ ಸಾಮಾಜಿಕ ಬದ್ಧತೆಯಿಂದ ನಮ್ಮ ಶಾಲೆಯ ಬೆಳಕಿನ ಕಷ್ಟಕ್ಕೆ ಶಾಶ್ವತ ಪರಿಹಾರ ನೀಡಿದಂತಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ ನೀಡಿದೆ. ನಾವು ಇದರ ಸದುಪಯೋಗ ಮಾಡಿಕೊಳ್ಳುತ್ತೇವೆ.
ಎಂ.ಎಂ.ಭಟ್ಟ ಕಾರೇಕೊಪ್ಪ, ಕಾರ್ಯದರ್ಶಿ