ಅಂಕೋಲಾ : ಕಳೆದ ಡಿಸೆಂಬರ್ 21 ರಂದು ಅಂಕೋಲಾ ತಾಲೂಕಿನ ಕೆ.ಸಿ.ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎ.ಟಿ.ಎಂ ನಲ್ಲಿ ಹಣ ತೆಗೆಯಲು ಹೋಗಿದ್ದ ಬೋಳೆ ಗ್ರಾಮದ ನಿವಾಸಿ ವಿಜೇತ ಕಿಶೋರ ನಾಯ್ಕ ಎನ್ನುವವರಿಗೆ , ಎಟಿಎಂ ಕೇಂದ್ರದಲ್ಲಿದ್ದುಕೊಂಡು ಸಹಾಯ ಮಾಡುವ ನೆಪದಲ್ಲಿ, ಕಿಶೋರನ ಅರಿವಿಗೆ ಬಾರದಂತೆ ಎ.ಟಿ.ಎಂ ಕಾರ್ಡ್ ಬದಲಾಯಿಸಿ, ತನ್ನ ಬಳಿ ಇರುವ ಬೇರೆ ಕಾರ್ಡನ್ನು ಕಿಶೋರ ನಾಯಕನಿಗೆ ನೀಡಿ ಮರಳು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈಬಸಂದರ್ಭದಲ್ಲಿ ಎ.ಟಿ.ಎಂ ನಲ್ಲಿ ಹಣ ತೆಗೆಯಲು ಬಂದ ಮುಗ್ಧ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎ.ಟಿ.ಎಂ ಕಾರ್ಡ್ ಬದಲಾಯಿಸಿ, ನಂತರ ತಾನು ಅವರ ಖಾತೆಯಿಂದ ಹಣ ತೆಗೆದು ವಂಚಿಸುತ್ತಿದ್ದ ಅಂತರ್ ರಾಜ್ಯ ಆರೋಪಿ ಈತ ಎಂಬುದು ಗಮನಕ್ಕೆ ಬಂದಿದೆ.
ಅಂಕೋಲಾ ಪೊಲೀಸರ ತಂಡ ಅತ್ಯಂತ ಚಾಣಾಕ್ಷತೆಯಿಂದ ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಪ್ರಯಾಗರಾಜ ಜಿಲ್ಲೆಯ,ಮೇಜಾ ತಾಲೂಕಿನ ನಿವಾಸಿ ವಿಜಯ ಅಂಗಧಪ್ರಸಾದ ದ್ವಿವೇದಿ ಬಂಧಿತ ಆರೋಪಿಯಾಗಿದ್ದು ,ಅಂತರ್ ರಾಜ್ಯ ವಂಚಕನಾದ ಈತ ಹಾಲಿ ವಸತಿಯನ್ನು ಮುಂಬೈನ ಅಂಧೇರಿಯ ಕುರ್ಲಾ ರಸ್ತೆಯಲ್ಲಿ ಮಾಡಿಕೊಂಡಿದ್ದು, ಬಾಡಿಗೆ ಕಾರ್ ನಲ್ಲಿ ದೇಶದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಾ ತನ್ನ ವಂಚನೆ ಖರಾಮತ್ತು ಮುಂದುವರಿಸಿ ಕೊಂಡಿದ್ದ ಎನ್ನಲಾಗಿದೆ.
ಶಿರಸಿ, ಯಲ್ಲಾಪುರ,ಕಾಪು ಮಂಗಳೂರು ಮತ್ತಿತರೆಡೆ ಬೇರೆ ಬೇರೆ ವ್ಯಕ್ತಿಗಳಿಗೂ ಅವರ ಕಾರ್ಡ್ ಬದಲಿಸಿ,ತನ್ನ ವಂಚನೆ ಕರಾಮತ್ತು ತೋರಿಸಿದ್ದ ಎನ್ನಲಾಗಿದ್ದು ,ಈತನ ವಿರುದ್ಧ ಕೆಲವೆಡೆ ಪ್ರಕರಣ ದಾಖಲಾಗಿದ್ದಾರೆ,ಇನ್ನು ಕೆಲವೆಡೆ ಈವರೆಗೂ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ನಿರ್ದೇಶಕನಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ, ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್.ಐ ಪ್ರವಿಣಕುಮಾರ್, ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಎ.ಎಸ್. ಐ ಬಾಬು ಆಗೇರ, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಭಗವಾನ್ ಗಾಂವಕರ್, ಮನೋಜ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.