ಬೆಂಗಳೂರು: ಇಡೀ ಜಗತ್ತು ಇಂದು ಶಾಂತಿ- ನೆಮ್ಮದಿಗಾಗಿ ಹಪಹಪಿಸುತ್ತಿದ್ದು, ವಿಶ್ವಾದ್ಯಂತ ಜನ ಮನಃಶಾಂತಿಯ ಹುಡುಕಾಟದಲ್ಲಿದ್ದಾರೆ. ಆದರೆ ಶ್ರದ್ಧಾಭಕ್ತಿಯ ಪೂಜೆಯಿಂದ ಪರಮಾನಂದ ಪಡೆಯಬಹುದು ಎಂಬ ಸತ್ಯದರ್ಶನ ಅವರಿಗೆ ಆಗುತ್ತಿಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.
ರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮಪ್ರದೋಷದಂದು ಲೋಕ ಹಿತಕ್ಕಾಗಿ ನಡೆದ ಅತ್ಯಪರೂಪದ ಸೋಮ ಸಪರ್ಯಾ ಧರ್ಮಸಭೆಯಲ್ಲಿ ಪರಮಪೂಜ್ಯರು ಸಂದೇಶ ಅನುಗ್ರಹಿಸಿದರು.
ಶಿವ ಶೂಲಪಾಣಿಯಾಗಿ ಪ್ರದೋಷದಂದು ಸಂಚಾರ ಮಾಡುತ್ತಾನೆ ಎಂಬ ಪ್ರತೀತಿ ಇದೆ. ಈ ಸಂದರ್ಭ ವಿಶೇಷ ಸಪರ್ಯ ನಡೆದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ 1800 ರುದ್ರಪಾಠಕರು ಇಂದು ರುದ್ರಪಠಣ ಮಾಡಿದ್ದಾರೆ. ರುದ್ರದ ಶಕ್ತಿ ಅದ್ಭುತ. ರುದ್ರಾಧ್ಯಾಯ ಎನ್ನುವುದು ಎಲ್ಲರ ಪಾಲಿಗೆ ಮಾಣಿಕ್ಯ. ಅತಿರುದ್ರ, ಮಹಾರುದ್ರಕ್ಕೂ ಮಿಗಿಲಾದ ಸೇವೆ ಇಂದು ಸಂದಿವೆ. 21600 ರುದ್ರಜಪ ನಡೆದಿದೆ. ಅಭಿಷೇಕದ ಎರಡು ಕೈಗಳ ಹಿಂದೆ ಹಲವು ಹೃದಯ, ಭಾವ, ಭಕ್ತಿಗಳು ಸೇರಿವೆ. ಶಿವನ ಅನುಗ್ರಹದಿಂಧ ಯಶಸ್ಸು- ಶ್ರೇಯಸ್ಸು, ಆನಂದ ಸುಖ ಲಭಿಸುತ್ತದೆ. ಭಕ್ತಜನರನ್ನು ಸಾಧನ ಮಾಡಿಕೊಂಡು ಚಂದ್ರಮೌಳೀಶ್ವರ ದೇಶಕ್ಕೆ ಬೆಳದಿಂಗಳು ಕರುಣಿಸಲಿ. ಚಂದ್ರಪ್ರಕಾಶದ ಬೆಳಕು ದೇಶಕ್ಕೆ ಹರಿಯಲಿ. ಪ್ರತಿಯೊಬ್ಬರ ಹೃದಯದಲ್ಲೂ ಅರಿವಿನ ದೀಪ ಬೆಳಗಿ ಇಡೀ ದೇಶಕ್ಕೆ ದೀಪೋತ್ಸವವನ್ನು ಶ್ರೀ ಚಂದ್ರಮೌಳೀಶ್ವರ ಕರುಣಿಸಲಿ ಎಂದು ಆಶಿಸಿದರು.

RELATED ARTICLES  ಆಸ್ತಿಗಾಗಿ ಬರ್ಬರ ಕೊಲೆ : ಮನೆಯವರೇ ಹರಿಸಿದರು ರಕ್ತದ ಕೋಡಿ.


“ಜೀವ- ದೇವರು ಒಂದಾಗುವ ಘಟ್ಟ ಪೂಜೆ. ದೇಹಕ್ಕೆ ದುಃಖ ಉಂಟಾಗುವುದು ದೇವರಿಂದ ದೂರವಾದಾಗ. ಆ ಶಾಂತಿ, ನೆಮ್ಮದಿ, ಪ್ರಸನ್ನತೆ ದೇವರಿಂದ ಜೀವಕ್ಕೆ ಹರಿದು ಪ್ರಾಪ್ತವಾಗುತ್ತದೆ. ಇದು ಶಕ್ತಿ, ಚೈತನ್ಯಕ್ಕೆ ಇದು ಮೂಲ. ಪರಮಾನಂದದ ಮಾರ್ಗ” ಎಂದು ವಿಶ್ಲೇಷಿಸಿದರು.
ಆದಿಶಂಕರರು ಮನಸ್ಸಿನ ಶಾಂತಿ ಗಳಿಸಿಕೊಳ್ಳುವ ಒಂದೂಕಾಲು ಲಕ್ಷ ಬಗೆಗಳನ್ನು ತೋರಿಸಿಕೊಟ್ಟಿದ್ದಾರೆ. ಇದರಲ್ಲಿ ಲಯಕರ್ತನಾದ ಶಿವನ ಉಪಾಸನೆ ಕೂಡಾ ಒಂದು. ಬಿಂದು ರೂಪವಾಗಿ ಇದ್ದ ಶ್ರೀ ಚಂದ್ರಮೌಳೀಶ್ವರ ದೇಗುಲ ಸಿಂಧುರೂಪವಾಗಿ ಬೆಳೆದಿದ್ದು, ರಾಜ್ಯದಲ್ಲೇ ಅತ್ಯಪೂರ್ವ ಶ್ರದ್ಧಾ ಕೇಂದ್ರವಾಗಿ ಬೆಳೆದು ನಿಂದಿದೆ. ಶಿವನ ಪೂಜೆ ಶಾಂತಿ, ಸಮಾಧಾನ, ಚೈತನ್ಯ ನೀಡುವ ಜತೆಗೆ ಧರ್ಮ ರಕ್ಷಣೆ, ರಾಷ್ಟ್ರರಕ್ಷಣೆಯ ಕಾರ್ಯಕ್ಕೆ ಪ್ರೇರಣೆಯನ್ನೂ ನೀಡುತ್ತದೆ ಎಂದರು.


ಗೃಹ ಸಚಿವ ಅರಗ ಜ್ಞಾನೇಂದ್ರ, ಆರೆಸ್ಸೆಸ್ ಮಾರ್ಗದರ್ಶಕ ಕಲ್ಲಡ್ಕ ಡಾ.ಪ್ರಭಾಕರ ಭಟ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಮ್ಮುಡಿ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ.ಭೀಮೇಶ್ವರ ಜೋಶಿ, ಸಿಗಂಧೂರು ಕ್ಷೇತ್ರದ ಪ್ರಧಾನ ಅರ್ಚಕ ಶೇಷಗಿರಿ ಭಟ್, ವಾಸ್ತು ತಜ್ಞ ಮಹೇಶ್ ಮುನಿಯಂಗಳ, ಶಾಸಕರಾದ ಹರತಾಳು ಹಾಲಪ್ಪ, ಬೆಳ್ಳಿ ಪ್ರಕಾಶ್, ಸುಕುಮಾರ್ ಶೆಟ್ಟಿ, ದತ್ತಾತ್ರೇಯ ಶಿವಮೊಗ್ಗ, ಅಖಿಲ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪಿ.ಎಸ್.ಪ್ರಕಾಶ್, ದಾನಿ ಹೊಸಪೇಟೆ ಶ್ರೀನಿವಾಸ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸಭಾಪೂಜೆ ನೆರವೇರಿಸಿದರು. ಚಂದ್ರಮೌಳೀಶ್ವರ ಪ್ರಕಲ್ಪದ ಮುಖ್ಯಸ್ಥ ಹರಿಪ್ರಸಾದ್ ಪೆರಿಯಾಪು ವಂದಿಸಿದರು. ಶ್ರೀಮಠದ ಧರ್ಮ ಕರ್ಮ ವಿಭಾಗದ ಶ್ರೀ ಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ನಿರೂಪಿಸಿದರು.

RELATED ARTICLES  ಕುಮಟಾಕ್ಕೆ ಬಿ.ಕೆ ಹರಿಪ್ರಸಾದ್ ಭೇಟಿ.


ಸೋಮ ಸಪರ್ಯಾ 21 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿರುವ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ 1800ಕ್ಕೂ ಹೆಚ್ಚು ರುದ್ರಪಾಠಕರು ಏಕಕಂಠದಲ್ಲಿ ರುದ್ರಪಠಣ ಮಾಡುವ ಮೂಲಕ ಶರಾವತಿ ನದಿ ತೀರದಲ್ಲಿ ರುದ್ರ ಜಪ ಅನುರಣಿಸಿತು.