ಕಲಬುರಗಿ: ಮುಂದಿನ ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ತಾವು ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಚಿತಪಡಿಸಿದ್ದಾರೆ.
ಕಲಬುರಗಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಳ್ಳಲು ಪಕ್ಷದ ನಾಯಕರು ಸೂಚಿಸಿದ್ದಾರೆ. ತಾವು ಶಿಕಾರಿಪುರ ಕ್ಷೇತ್ರದಿಂದ ಹಲವು ವರ್ಷಗಳಿಂದ ಸ್ಪರ್ಧಿಸುತ್ತಾ ಬಂದಿದ್ದು ಈ ಬಾರಿ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಲು ತಮಗೂ ಇಚ್ಛೆಯಿದೆ ಎಂದು ಹೇಳಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಿರಾ ಎಂದು ಸುದ್ದಿಗಾರರು ಕೇಳಿದಾಗ, ಆ ಬಗ್ಗೆ ಇನ್ನೂ ಯೋಚಿಸಿಲ್ಲ. ಆದರೆ ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದರೆ ಬಿಜೆಪಿಗೆ ಹೆಚ್ಚಿನ ಮತ ಸಿಗುವ ಸಾಧ್ಯತೆಯಿದೆಯೇ ಎಂದು ಕೇಳಿದಾಗ, ಖಚಿತವಾಗಿ ಹೌದು ಎಂದು ಉತ್ತರಿಸಿದರು. ನಾಲ್ಕರಿಂದ ಐವರು ಸಚಿವರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇದೇ 23 ಮತ್ತು 24ರಂದು ಬಿಡುಗಡೆ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಬಂಧಪಟ್ಟ ದಾಖಲೆಗಳೇ ಎಂದು ಕೇಳಿದಾಗ ಸಿದ್ದರಾಮಯ್ಯನವರ ಕುಟುಂಬದವರು ಮತ್ತು ಸಂಬಂಧಿಕರಿಗೆ ಸಂಬಂಧಪಟ್ಟ ದಾಖಲೆಗಳು ಎಂದರು.
ನೀರಾವರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕೊಪ್ಪಳದಲ್ಲಿ ನಾಳೆ ಪ್ರತಿಭಟನೆ ನಡೆಸಲಿದೆ. ವಿಶ್ವ ಕರ್ಮ ಜಯಂತಿಯನ್ನು ಅಕ್ಟೋಬರ್ 8ರಂದು ಬಿಳಗಿಯಲ್ಲಿ ಎಸ್ ಸಿ/ಎಸ್ ಟಿ ಸಮ್ಮೇಳನ, ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅಕ್ಟೋಬರ್ 22ರಂದು ಮತ್ತು 23ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ. ರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಪ್ರಧಾನಿಯವರು ನವ ಕರ್ನಾಟಕ ನಿರ್ಮಾಣಕ್ಕೆ ಪರಿವರ್ತನ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮೂರು ತಿಂಗಳು ಇಡೀ ರಾಜ್ಯಾದ್ಯಂತ ಬಿಜೆಪಿ ಯಾತ್ರೆ ಕೈಗೊಳ್ಳಲಿದೆ.
ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಸಿದ್ದ: ಹೈಕಮಾಂಡ್ ಬಯಸಿದರೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಕೋಲಾರದಲ್ಲಿ ಹೇಳಿದ್ದಾರೆ. ಉತ್ತರ ಕರ್ನಾಟಕದಿಂದ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.
RELATED ARTICLES  ಟಿಪ್ಪು ಜಯಂತಿ ಬದಲು ಸಿದ್ದರಾಮಯ್ಯ ಜಯಂತಿ ಆಚರಿಸುವುದು ಒಳ್ಳೆಯದು : ನಳೀನ್ ಕುಮಾರ್ ಕಟೀಲ್