ಮುಂಡಗೋಡ: ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮುಂಡಗೋಡ ಮೂಲದ ಸ್ನೇಹಾ ಮತ್ತು ನಾಜಿಯಾ ಅವರ ಮನೆಗಳಿಗೆ ಕಾರ್ಮಿಕ ಸಚಿವ ಹಾಗೂ ಈ ಕ್ಷೇತ್ರದ ಶಾಸಕರೂ ಆಗಿರುವ ಶಿವರಾಮ ಹೆಬ್ಬಾರ್ ಇಂದು ಭೇಟಿ ನೀಡಿ, ಪಾಲಕರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರ ಪಾಲಕರಿಂದ ಮಾಹಿತಿ ಪಡೆದ ಶಿವರಾಮ ಹೆಬ್ಬಾರ್, ತಮಗೂ ಬಂದಿರುವ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಂಡರು. ಎಲ್ಲರೂ ಸುರಕ್ಷಿತವಾಗಿ ಬರಲಿದ್ದಾರೆ, ಧೈರ್ಯದಿಂದಿರಿ. ಸರ್ಕಾರ ಎಲ್ಲರನ್ನೂ ಕರೆತರಲು ವ್ಯವಸ್ಥೆ ಮಾಡಿದೆ ಎಂದು ಪಾಲಕರಿಗೆ ಅಭಯ ನೀಡಿದರು.
ಇನ್ನು ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್ ನಲ್ಲಿ ಸಿಲುಕಿರುವ ಮೂವರು ಮಕ್ಕಳೂ ನನ್ನ ಕ್ಷೇತ್ರದವರು. ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದು, ಮೂವರೂ ಸುರಕ್ಷಿತ ಸ್ಥಳದಲ್ಲಿದ್ದಾರೆ. ಎಲ್ಲರೂ ಉಕ್ರೇನ್ ನಿಂದ ಹೊರಬಂದಿದ್ದಾರೆ. ಸ್ನೇಹಾ ಪೋಲ್ಯಾಂಡ್ ಗೆ ಬಂದಿದ್ದು, ಆಕೆಗೆ ಕೇಂದ್ರ ಸರ್ಕಾರದ ರಾಯಭಾರಿ ಕಚೇರಿ ಎಲ್ಲಾ ವ್ಯವಸ್ಥೆ ಮಾಡಿದೆ. 46 ವಿಮಾನಗಳನ್ನು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಹಾಗೂ ಭಾರತೀಯ ನಾಗರಿಕರನ್ನು ಕರೆತರಲು ನಿಯೋಜಿಸಲಾಗಿದೆ. ಎಲ್ಲಾ ಮಕ್ಕಳನ್ನೂ ಸುರಕ್ಷಿತವಾಗಿ ಕರೆತಂದು ಅವರ ಮನೆಗಳಿಗೆ ತಲುಪಿಸುವುದು ಸರ್ಕಾರದ ಜವಬ್ದಾರಿಯಾಗಿದೆ ಎಂದರು.