ಭಟ್ಕಳ: ಮನೆಯ ಹೊರಗಡೆ ಬಂದ ವೃದ್ಧೆಯೋರ್ವರ ಮೇಲೆ ಏಕಾಏಕಿಯಾಗಿ ಮಂಗವೊಂದು ದಾಳಿ ನಡೆಸಿ ಪರಾರಿಯಾ ಗಿರುವ ಘಟನೆ ತಾಲೂಕಿನ ಗುಡ್ಲಕ್ ರೋಡ್ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ಬೀಬಿ ಅಮೀನಾ ಎಂದು ಗುರುತಿಸಲಾಗಿದೆ. ಈಕೆಯ ಕೈ ಭಾಗದಲ್ಲಿ ಮಂಗ ಕಚ್ಚಿ ಗಾಯಗೊಳಿಸಿರುವುದು ಕಂಡು ಬಂದಿದೆ.
ವೃದ್ಧಿಗೆ ಹೆಚ್ಚು ಓಡಾಡಲು ಸಾಧ್ಯವಾಗದ ಕಾರಣ ವೈದ್ಯರೇ ಮಹಿಳೆಯ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದಾರೆ. ಕಳೆದ 3 ತಿಂಗಳಿನಿಂದ ಮಂಗ ಗುಡ್ಲಕ್ ರೋಡ್ ಭಾಗದಲ್ಲಿ ಹುಚ್ಚಾಟ ನಡೆಸಿದ್ದು, ಈಗಾಗಲೇ 14 ಜನರು ಮಂಗನ ದಾಳಿಗೆ ಒಳಗಾಗಿದ್ದಾರೆ. ಈ ಕುರಿತು ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಮಂಗನನ್ನು ಓಡಿಸಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.