ನ್ಯೂಸ್ ಡೆಸ್ಕ್ : ವಿಶ್ವ ಕ್ರಿಕೆಟ್ ನ ಸ್ಪಿನ್ ದಿಗ್ಗಜ ಆಸ್ಟ್ರೇಲಿಯಾದ ಶೇನ್ ವಾರ್ನ್ ಹೃದಯಾಘಾತದಿಂದ ಹಠಾತ್ ನಿಧನವಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಶೇನ್ ವಾರ್ನ್ ನಿಧನವಾಗಿರುವ ಬಗ್ಗೆ ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ವರದಿ ಮಾಡಿದೆ. ಹೃದಯಾಘಾತದಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ಇದ್ದು, ಶೇನ್ ವಾರ್ನ್ ಹಠಾತ್ ನಿಧನಕ್ಕೆ ವಿಶ್ವ ಕ್ರಿಕೆಟ್ ದಿಗ್ಭಮೆ ವ್ಯಕ್ತಪಡಿಸಿದೆ. ಶುಕ್ರವಾರ ಮುಂಜಾನೆ ರೋಡ್ ಮಾರ್ಷ್ ನಿಧನಕ್ಕೆ ಸಂತಾಪ ಸೂಚಿಸಿ ಕೆಲವೇ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶೇನ್ ವಾರ್ನ್ ನಿಧನ ಸುದ್ದಿ ವಿಶ್ವ ಕ್ರಿಕೆಟ್ ಗೆ ಬರ ಸಿಡಿಲಿನಂತೆ ಅಪ್ಪಳಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ ನಿಧನರಾಗಿರುವ ಬಗ್ಗೆ ಅವರ ಮ್ಯಾನೇಜ್ ಮೆಂಟ್ ಕಂಪನಿ ಸಂಕ್ಷಿಪ್ತ ಪದಗಳ ಹೇಳಿಕೆಯನ್ನು ಪ್ರಕಟ ಮಾಡಿದೆ.
“ತಮ್ಮ ಮನೆಯಲ್ಲಿ ಯಾವುದೇ ಪ್ರತಿಕ್ರಯೆ ಇಲ್ಲದೇ ಬಿದ್ದ ರೀತಿಯಲ್ಲಿ ಕಂಡು ಬಂದಿದ್ದರು. ವೈದ್ಯಕೀಯ ಸಿಬ್ಬಂದಿಯ ಅವಿರತ ಪ್ರಯತ್ನದ ಹೊರತಾಗಿಯೂ ಅವರನ್ನು ಜೀವಂತವಾಗಿಡಲು ಸಾಧ್ಯವಾಗಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕುಟುಂಬವು ಈ ಸಮಯದಲ್ಲಿ ಗೌಪ್ಯತೆಯನ್ನು ವಿನಂತಿಸುತ್ತದೆ ಮತ್ತು ಸರಿಯಾದ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಒದಗಿಸಲಾಗುತ್ತದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳಿಂದ “ವಾರ್ನಿ” ಎನ್ನುವ ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ವಾರ್ನ್, ಅವರನ್ನು ಎದುರಿಸಿದ ಬ್ಯಾಟ್ಸ್ ಮನ್ ಗಳೆಲ್ಲರೂ ಅವರನ್ನು ತಾವು ಎದುರಿಸಿದ ಅತ್ಯಂತ ಕಷ್ಟದ ಬೌಲರ್ ಎಂದು ಬಣ್ಣಿಸಿದ್ದಾರೆ. 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಟವಾಡಿದ ಶೇನ್ ವಾರ್ನ್ ಅವರು 708 ಟೆಸ್ಟ್ ವಿಕೆಟ್ ಗಳನ್ನು ಪಡೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಪರವಾಗಿ ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ಬೌಲರ್ ಹಾಗೂ ಸಾರ್ವಕಾಲಿಕವಾಗಿ ಗರಿಷ್ಠ ಟೆಸ್ಟ್ ವಿಕೆಟ್ ಉರುಳಿಸಿದ ವಿಶ್ವದ 2ನೇ ಬೌಲರ್ ಎನಿಸಿದ್ದಾರೆ.
ಕ್ರಿಕೆಟ್ ಕುರಿತಾದ ಜಗತ್ತಿನ ಅತ್ಯಂತ ಪ್ರಖ್ಯಾತ ಮ್ಯಾಗಝೀನ್ ವಿಸ್ಡನ್ ಹೇಳಿದ ಶತಮಾನದ ಐವರು ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಶೇನ್ ವಾರ್ನ್, 1992 ರಿಂದ 2007ರ ವರೆಗೆ ವಿಶ್ವ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದರು. 1999ರಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಆಸ್ಟ್ರೇಲಿಯಾ ಪರವಾಗಿ 145 ಟೆಸ್ಟ್ ಹಾಗೂ 194 ಏಕದಿನ ಪಂದ್ಯವಾಡಿದ್ದ ವಾರ್ನ್, ಏಕದಿನ ಕ್ರಿಕೆಟ್ ನಲ್ಲಿ 293 ವಿಕೆಟ್ ಉರುಳಿಸಿದ್ದರು. 1992ರಲ್ಲಿ ಭಾರತ ವಿರುದ್ಧ ಸಿಡ್ನಿ ಟೆಸ್ಟ್ ನಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಅವರು ಮರು ವರ್ಷವೇ ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ ನಲ್ಲಿ ಆಡುವ ಮೂಲಕ ಏಕದಿನ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಕೋಚಿಂಗ್ ಹುದ್ದೆಯಲ್ಲಿದ್ದ ಶೇನ್ ವಾರ್ನ್, ಚೊಚ್ಚಲ ಆವೃತ್ತಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಅದೇ ತಂಡಕ್ಕೆ ಮೆಂಟರ್, ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು.
Source : Suvarna News