ಹೊನ್ನಾವರ: ಪ್ರಸ್ತುತ ಯುದ್ಧ ತಂದೊಡ್ಡುತ್ತಿರುವ ದುಷ್ಪರಿಣಾಮಗಳೂ ಕೂಡ ಜಾಗತಿಕ ತಾಪಮಾನ ಏರಲು ಕಾರಣವಾಗಬಲ್ಲವು ಎಂದು ನಿವೃತ್ತ ಮುಖ್ಯಾಧ್ಯಾಪಕ ಎನ್.ಆರ್.ಗಜು, ಕುಮಟಾ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಸರಕಾರಿ ಪ್ರೌಢಶಾಲೆ ಚಿತ್ತಾರದ ಧರಣಿ ಪೆಟ್ರೋಲಿಯಮ್ ಸಂರಕ್ಷಣಾ ಸಂಶೋಧನಾ ಸಂಸ್ಥೆಯ ಘಟಕದಡಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ‘ಪೆಟ್ರೋಲಿಯಮ್ ಉತ್ಪನ್ನಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ ಅದಕ್ಕೆ ಬದಲಾಗಿ ಪರಿಸರ ಸ್ನೇಹಿ ಇಂಧನ ಬಳಕೆ ಮತ್ತು ಸಂಶೋಧನೆಗೆ ಮನುಕುಲ ಪಣತೊಡಗಬೇಕಾಗಿದೆ. ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಭೂಗೃಹವನ್ನು ಬಲಿಗೊಡದೇ ಮುಂದಿನ ಪೀಳಿಗೆಗೆ ಕಾಪಿಡಬೇಕು’ ಎಂದು ಎಚ್ಚರಿಸಿದರು.
ಸಂಘದಡಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಘೋಷಣಾ ಸಂದೇಶ ರಚನೆ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ಕು. ಅಪೇಕ್ಷಾ ಭಟ್ ಪ್ರಾರ್ಥನೆಗೈದರು. ಸಂಘದ ಸಂಚಾಲಕ ಶಿಕ್ಷಕ ಪ್ರಕಾಶ ನಾಯ್ಕ ಅಳ್ವೇದಂಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯಾಧ್ಯಾಪಕ ದೀಪಕ ನಾಯ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕಿ ಸುಪ್ರಿಯಾ ಹೆಗಡೆ ವಿಜೇತ ವಿದ್ಯಾರ್ಥಿಗಳ ಯಾದಿ ಪ್ರಕಟಿಸಿದರು. ಶಿಕ್ಷಕಿ ಸವಿತಾ ಗೌಡ ನಿರೂಪಿಸಿದರು. ಶಿಕ್ಷಕ ಶ್ರೀನಿಧಿ ಹೆಗಡೆ ವಂದಿಸಿದರು. ತರುವಾಯ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಅಭಿಪ್ರೇರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಅತಿಥಿ ಎನ್.ಆರ್.ಗಜು ಅವರನ್ನು ಸನ್ಮಾನಿಸಲಾಯಿತು.