ಶಿರಸಿ: ಭಟ್ಕಳ ಗಲಭೆಯಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದ್ದು, ಪ್ರಮುಖವಾಗಿ ಬಿಜೆಪಿಯ ಸುಮಾರು 94 ಕಾರ್ಯಕರ್ತರ ಮೇಲೆ ಗಲಭೆಗೆ ಸಂಬಂಧಿಸಿ ಪ್ರಕರಣ ದಾಖಲಿಸುವ ಯತ್ನ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ರವಿ ಹೆಗಡೆ ಹೂವಿನಮನೆ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ತಪ್ಪು ಮಾಡದ ಬಿಜೆಪಿ ಕಾರ್ಯಕರ್ತರನ್ನು ಮನೆ ಮನೆಗೆ ಹೋಗಿ ಬಂಧಿಸುವ ಕೆಲಸ ನಡೆದಿದೆ. 94 ಕ್ಕೂ ಅಧಿಕ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗಿದ್ದು, ಅದರಲ್ಲಿ 10ಕ್ಕೂ ಅಧಿಕ ಜನರನ್ನು ಈಗಾಗಲೇ ಬಂಧಿಸಿದೆ. ಕಾನೂನನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಬಿಜೆಪಿಯನ್ನು ಹಳಿಯಲು ಮುಂದಾಗಿದ್ದಾರೆ ಎಂದು ದೂರಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಸೆ.395 ದಾಖಲು ಮಾಡುವುದರೊಂದಿಗೆ ದರೋಡೆ ಪ್ರಕರಣವನ್ನು ದಾಖಲು ಮಾಡುತ್ತಿದ್ದಾರೆ. ಅಲ್ಲಿ ಯಾರು ದರೋಡೆ ಮಾಡಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ. ಯಾವ ಆಧಾರದ ಮೇಲೆ ಅವರು ದರೋಡೆ ಪ್ರಕರಣವನ್ನು ದಾಖಲಿಸುತ್ತಾರೆ ? ಯಾರು ದರೋಡೆ ಮಾಡಿದ್ದಾರೆ ? ಇವೆಲ್ಲದಕ್ಕೂ ಸರ್ಕಾರ ಉತ್ತರಿಸಬೇಕಿದೆ. ಒಟ್ಟಿನಲ್ಲಿ ನ್ಯಾಯಾಲಯದಲ್ಲಿ ಜಾಮೀನು ಸಿಗಬಾರದೆಂಬುದು ಅವರ ಉದ್ದೇಶವಾಗಿದೆ ಎಂದು ಜರಿದರು.
ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಸುಮ್ಮನೆ ರಾಜಕೀಯ ಲಾಭಕ್ಕಾಗಿ ಕಾಯಕರ್ತರ ಮೇಲೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಬಡ ಜನರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟು ಸರಿ ? ಇದು ಇನ್ನೂ ಸಹ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬರಲಿಲ್ಲವೇ ? ಆದ್ದರಿಂದ ಅಮಾಯಕರ ಮೇಲೆ ಹಾಕಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಡಿ.ಹೆಗಡೆ, ಆರ್.ವಿ.ಹೆಗಡೆ, ಗಣಪತಿ ನಾಯ್ಕ, ಸದಾನಂದ ಭಟ್, ರಮಾಕಾಂತ್ ಭಟ್ ಇದ್ದರು.