ಕುಮಟಾ ತಾಲೂಕಿನ ಹೊಸಾಡಿನಲ್ಲಿರುವ ವಿಶ್ವದ ಮೊಟ್ಟ ಮೊದಲ ಗೋಬ್ಯಾಂಕ್ ನಲ್ಲಿ ” ಆಲೆಮನೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹಿರಿಯ ಶಿಕ್ಷಣ ತಜ್ಞ ಶ್ರೀ ಅರುಣ ಉಭಯಕರ್ ಕಬ್ಬಿನ ಗಾಣಕ್ಕೆ ಕಬ್ಬು ಕೊಡುವುದರ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಘಾಟನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಶ್ರೀಕರಾರ್ಚಿತ ಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರನ್ನು ಕರೆತಂದ ಶ್ರೀ ಮಠದ ವಾಹನ ಆಗಮಿಸಿದ್ದು ನೆರೆದಿದ್ದ ಗೋ ಭಕ್ತರ ಸಂತಸಕ್ಕೆ ಕಾರಣವಾಯ್ತು. ಸಿದ್ದಾಪುರದ ಗೋ ಸ್ವರ್ಗಕ್ಕೆ ತೆರಳುತ್ತಿದ್ದ ವಾಹನದ ಆಗಮನ ಶುಭದ ಸೂಚನೆ ಎಂಬ ಮಾತುಗಳು ಕೇಳಿಬಂದವು. ಇದೇ ಸಂದರ್ಭದಲ್ಲಿ ಗೋ ಬ್ಯಾಂಕ್ ನ ಆಕಳೊಂದು ಕರುವಿಗೆ ಜನ್ಮ ನೀಡಿದ್ದು ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಯ್ತು.
ಉದ್ಘಾಟಿಸಿ ಮಾತನಾಡಿದ ಶ್ರೀ ಅರುಣ ಉಭಯಕರ್ ರವರು ಶ್ರೀಮಠದ ಕಾರ್ಯಗಳನ್ನು ಕೊಂಡಾಡಿದರು. ಗೋ ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದರು. ಗೋ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಮುರಳೀಧರ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀ ಸುಬ್ರಾಯ ಭಟ್ಟ, ಕುಮಟಾ ಮಂಡಲ ಅಧ್ಯಕ್ಷರಾದ ಶ್ರೀ ಜಿ.ಎಸ್.ಹೆಗಡೆ. ಗೋ ಸಂಧ್ಯಾ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಉಗ್ರು, ವಿದ್ಯಾನಿಕೇತನದ ಕಾರ್ಯಾಧ್ಯಕ್ಷರಾದ ಶ್ರೀ ಆರ್,ಜಿ,ಭಟ್ಟ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಅರುಣ ಹೆಗಡೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಗೋಪಾಲಕೃಷ್ಣ ಭಜನಾ ಮಂಡಳಿ ಹೆಬ್ಳೆಕೇರಿ ಕಡತೋಕಾ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು.
ಆಲೆಮನೆ ಹಬ್ಬ ದಿನಾಂಕ 13 ರ ವರೆಗೆ ನಡೆಯಲಿದ್ದು ಸಂಜೆ 4 ರಿಂದ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ರವಿವಾರ ಪೂರ್ಣ ದಿನ ಅವಕಾಶವಿದೆ. ದಿನಾಂಕ 12-3-2022 ರಂದು ವಿಶೇಷ ಗೋ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.