ಕುಮಟಾ : ಯುಗಾದಿ ಉತ್ಸವ ಸಮಿತಿಯಿಂದ ಆಚರಿಸಲ್ಪಡುವ ಈ ವರ್ಷದ ಯುಗಾದಿ ಉತ್ಸವವು ಏಪ್ರೀಲ್ ೦೨ಕ್ಕೆ ಕುಮಟಾ ಮಣಕಿಮೈದಾನದಲ್ಲಿ ಅತ್ಯಂತ ವೈಭವದಿಂದ ನೆಡೆಯಲಿದೆ. ಕುಮಟಾ ಯುಗಾದಿ ಉತ್ಸವಸಮಿತಿಯು ಕಳೆದ ೧೨ವರ್ಷಗಳಿದ ಕುಮಟಾದ ಸರ್ವಸಮಾಜಬಾಂಧವರ ಸಹಕಾರದೊಂದಿಗೆ ಯುಗಾದಿ ಉತ್ಸವವನ್ನು ಆಚರಿಸುತ್ತಾ ಬಂದಿದ್ದು, ೧೩ನೇ ವರ್ಷದ ಈ ಯುಗಾದಿ ಉತ್ಸವ ಆಚರಣೆಯ ಸಭಾಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಖ್ಯಾತ ವಾಗ್ಮಿಗಳೂ, ತಮ್ಮ ಪ್ರಖರ ರಾಷ್ಟçವಾದದ ಮೂಲಕ ಪ್ರಸಿದ್ಧಿ ಹೊಂದಿದ ಗುರುಪುರದ ವಜ್ರದೇಹಿಮಠದ ಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ವಹಿಸಿ ಆಶೀರ್ವಚನ ಮಾಡಲಿದ್ದಾರೆ.
ಸಭಾಕಾರ್ಯಕ್ರಮದ ಪೂರ್ವದಲ್ಲಿ ಬೃಹತ್ ಶೋಭಾಯಾತ್ರೆ ಕುಮಟಾದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಜನಮನವನ್ನು ಆಕರ್ಷಿಸಲಿದೆ.ಸಭಾಕಾರ್ಯಕ್ರಮದ ನಂತರ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಲಿದೆ. ಕಳೆದ ವರ್ಷ ಅತ್ಯಾಕರ್ಷಕವಾಗಿ ಮೂಡಿಬಂದ ಭಜನಾತಂಡಗಳ ನಡುವೆ ನೆಡೆಯುವ ಸ್ಪರ್ಧೆ ಈ ವರ್ಷವೂ ಇದರ ಪೂರ್ವಭಾವಿಯಾಗಿ ನಡೆಯಲಿದೆ, ಇದಕ್ಕೆ ಕುಮಟಾದ ಸರ್ವಸಮಾಜಬಾಂಧವರ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಕುಮಟಾ ಯುಗಾದಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾದ ಡಾ.ಸುರೇಶ ಹೆಗಡೆ, ಸಂಚಾಲಕರಾದ ಶ್ರೀ ಮುರಳೀಧರ ಪ್ರಭು, ಕಾರ್ಯದರ್ಶಿ ಶ್ರೀ ಆನಂದು ನಾಯ್ಕ ತಿಳಿಸಿದ್ದಾರೆ.