ಕಾರವಾರ: ಪಹರೆ ವೇದಿಕೆ ಆಯೋಜಿಸಿದ್ದ ‘ಸ್ವಚ್ಛತೆ ಕಡೆಗೆ ಪಹರೆ ನಡಿಗೆ’ ಪಾದಯಾತ್ರೆಗೆ ಸುಭಾಷ್ ವೃತ್ತದಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಪಹರೆ ಧ್ವಜವನ್ನು ವೇದಿಕೆಯ ಗೌರವಾಧ್ಯಕ್ಷೆ ಪ್ರಕಾಶ್ ಕೌರ್ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಸುಭಾಷ್ ವೃತ್ತದಿಂದ ಹೊರಟ ಸ್ವಚ್ಚತಾ ಪಾದಯಾತ್ರೆಗೆ ಬಿಣಗಾದಲ್ಲಿ ನಗರಸಭೆಯ ಉಪಾಧ್ಯಕ್ಷ ಪ್ರಕಾಶ್ ನಾಯ್ಕ ಅವರ ತಂಡ, ಚೆಂಡಿಯಾದಲ್ಲಿ ಸುಭಾಷ್ ಮತ್ತು ಸುರೇಶ್ ಅವರ ತಂಡ, ವಿನಾಯಕ ನಾಯ್ಕ, ಅಮದಳ್ಳಿಯಲ್ಲಿ ಸದಾನಂದ ಬಣಾರೆ ಮತ್ತು ತಂಡ ಪುಷ್ಪ ನೀಡಿ ಸ್ವಾಗತಿಸಿಕೊಂಡಿತು.
ಅಲ್ಲಲ್ಲಿ ಭೇಟಿಯಾದ ಸ್ಥಳೀಯರು ಕೂಡ ತಂಡಕ್ಕೆ ಉತ್ಸಾಹ ತುಂಬುತ್ತಿದ್ದರು. ಈ ವೇಳೆ ಪಹರೆ ಕಾರ್ಯಕರ್ತರು ರಸ್ತೆಯಲ್ಲಿ ಸಿಕ್ಕವರಿಗೆ ಸ್ವಚ್ಚತಾ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದರು. ಪಾದಯಾತ್ರೆಯುದ್ದಕ್ಕೂ ಪಹರೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅತಿ ಉತ್ಸಾಹದಿಂದ ಪಾಲ್ಗೊಂಡರು.
ಇನ್ನು ಪಾದಯಾತ್ರೆಗೆ ಕಾರವಾರದ ಸೈಕ್ಲಿಂಗ್ ಕ್ಲಬ್ ಕೂಡ ಸಹಕಾರ ನೀಡಿತು. ಇದೀಗ ಪಾದಯಾತ್ರೆ ಹಾರವಾಡಕ್ಕೆ ತಲುಪಿ ಮುಂದುವರಿದಿದ್ದು, ಸಂಜೆ ಅಂಕೋಲಾ ನಗರ ತಲುಪಲಿದೆ. ಈ ಪಾದಯಾತ್ರೆಯಲ್ಲಿ ವೇದಿಕೆಯ ಸಂಸ್ಥಾಪಕರಾದ ವಕೀಲ ನಾಗರಾಜ ನಾಯಕ, ಸೇಂಟ್ ಮಿಲಾಗ್ರಿಸ್ ನ ಜಾರ್ಜ್ ಫರ್ನಾಂಡೀಸ್, ಹಿರಿಯರಾದ ಕೆ.ಡಿ.ಪೆಡೇಕರ್, ರಾಮಾ ನಾಯ್ಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.