ಕುಮಟಾ: ತಾಲೂಕಿನ ಹೆಗಡೆ ಗ್ರಾ.ಪಂ ವ್ಯಾಪ್ತಿಯ ಮಾಸೂರಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಯಾದ “ಕಂದಾಯ ದಾಖಲೆಗಳು ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಶನಿವಾರ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಇದೊಂದು ರಾಜ್ಯ ಸರ್ಕಾರದ ವಿನೂತನ ಯೋಜನೆಯಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ರಾಜ್ಯ ಸರ್ಕಾರ ರೈತರ ಮಕ್ಕಳಿಗಾಗಿ ವಿದ್ಯಾಶ್ರೀ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ “ಕಿಸಾನ್ ಸಮ್ಮಾನ್” ಯೋಜನೆಯಿಂದ ಸಾಕಷ್ಟು ರೈತರು ಪ್ರಯೋಜನ ಪಡೆದಿದ್ದಾರೆ.ಇಂತಹ ಜನಸ್ನೇಹಿ ಯೋಜನೆಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಪಹಣಿ, ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಾಗಿದೆ.
ಇದೊಂದು ರಾಜ್ಯ ಸರಕಾರದ ಐತಿಹಾಸಿಕ ಕಾರ್ಯಕ್ರಮವಾಗಿದೆ. ಕಚೇರಿಗಳಿಗೆ ಜನರು ಅಲೆದಾಡುವುದನ್ನು ತಪ್ಪಿಸುವ ಮೂಲಕ ದಾಖಲೆಗಳನ್ನು ಸ್ಥಳದಲ್ಲೇ ಒದಗಿಸುವುದಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ಉಚಿತವಾಗಿ ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ, ಸಾರ್ವಜನಿಕರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ, ತಹಸೀಲ್ದಾರ ವಿವೇಕ ಶೇಣ್ವಿ, ಉಪತಹಸೀಲ್ದಾರ ಸತೀಶ ಗೌಡ, ಗ್ರಾ.ಪಂ ಅಧ್ಯಕ್ಷೆ ಶೀಲಾ ಪಟಗಾರ, ಮಂಡಳಾಧ್ಯಕ್ಷ ಹೇಮಂತಕುಮಾರ ಗಾಂವಕರ್, ಮಂಜು ಪಟಗಾರ ಇನ್ನಿತರರು ಇದ್ದರು.