ಕುಮಟಾ- ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಮುಲೈ ಮುಹಿಲನ್ ರವರು ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಪ್ರದೇಶವಾದ, ಕುಗ್ರಾಮ ಮೇದಿನಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದ ನಂತರ ಹಿಂತಿರುಗಿ ಬರುವಾಗ ಮಾರ್ಗಮಧ್ಯೆ ಸಂತೇಗುಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಎಲ್ಲಾ ವಿದ್ಯಾರ್ಥಿನಿಯರನ್ನು ವೈಯಕ್ತಿಕವಾಗಿ ಪರಿಚಯಿಸಿಕೊಂಡು, ಸಂವಾದ ನಡೆಸಿದರು. ಅವರ ಸಮಸ್ಯೆಗಳ ಬಗ್ಗೆ ಆಲಿಸಿ, ಪ್ರಶ್ನಿಸುವ ಮೂಲಕ ಉತ್ತರ ಪಡೆಯಲು ಪ್ರಯತ್ನಿಸಿದರು. ಹೆಣ್ಣೊಬ್ಬಳು ಕಲಿತರೆ ಅವಳೊಬ್ಬಳಿಗೆ ಮಾತ್ರ ಪ್ರಯೋಜನವಲ್ಲದೇ ಅವಳಿಂದ ಮುಂದಿನ ಪೀಳಿಗೆಯೇ ಪ್ರಗತಿ ಕಾಣುತ್ತದೆ. ಕಡು ಬಡತನದಲ್ಲಿದ್ದರೂ ನನ್ನ ತಾಯಿಯು ಶಿಕ್ಷಣ ಪಡೆದ ಕಾರಣ ಇಂದು ನಾನು ಕೂಡ ಶಿಕ್ಷಣ ಪಡೆಯಲು ಕಾರಣವಾಗಿದೆ. ಹಾಗೆಯೇ ನೀವು ಕೂಡ ಕಷ್ಟವಾದರೂ ನಿಮ್ಮ ನಿರಂತರ ಪ್ರಯತ್ನದಿಂದ ಉತ್ತಮ ಶಿಕ್ಷಣ ಪಡೆದು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರಲ್ಲದೇ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಯಾರು? ಎಂಬ ಕಲ್ಯಾಣಾಧಿಕಾರಿಯ ಪ್ರಶ್ನೆಗೆ ಎಲ್ಲಾ ವಿದ್ಯಾರ್ಥಿನಿಯರು ಒಕ್ಕೊರಲಿನಿಂದ ಒಮ್ಮೆಗೇ ” ಶ್ರೀ ಮುಲೈ ಮುಹಿಲನ್ ” ಸರ್ ಎಂದಾಗ, ತನ್ನ ಹೆಸರನ್ನು ಸರಿಯಾಗಿ ಉಚ್ಛಾರ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯರಿಗೆ ಧನ್ಯವಾದ ಹೇಳಿದರು.
ನಂತರ ವಿದ್ಯಾರ್ಥಿ ನಿಲಯದ ಕೊಠಡಿಗಳಿಗೆ ,ಶೌಚಾಲಯ ಕೊಠಡಿಗಳಿಗೆ ತೆರಳಿ ಸ್ವಚ್ಛತೆ, ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ಇದೇ ರೀತಿ ವಿದ್ಯಾರ್ಥಿ ನಿಲಯದ ಉತ್ತಮ ಗುಣಮಟ್ಟದ ನಿರ್ವಹಣೆ ಕಾಯ್ದುಕೊಳ್ಳಲು ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಸೂಚಿಸಿದರು. ಸಹಾಯಕ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ, ತಹಶೀಲ್ದಾರ್ ವಿವೇಕ ಶೇಣ್ವಿ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಟಿ. ನಾಯ್ಕ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣೇಶ ಜಿ. ಪಟಗಾರ, ವಿಸ್ತರಣಾಧಿಕಾರಿ ಗಜಾನನ ಹೆಗಡೆ, ಮೇಲ್ವಿಚಾರಕಿ ಶ್ಯಾಮಲಾ ನಾಯ್ಕ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.