ಕುಮಟಾ: ಕೊರನಾ ವಿಪತ್ತಿನ ಹಿನ್ನೆಲೆಯಲ್ಲಿ ಕಳೆದೆರಡು ಶೈಕ್ಷಣಿಕ ವರ್ಷಗಳಿಂದ ನೆನೆಗುದಿಯಾದ ಚಿತ್ರಗಿ ಮಹಾತ್ಮ ಗಾಂಧಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವು, ಈ ವರ್ಷ ಕೋವಿಡ್ ನಿಯಮಾವಳಿಗೆ ಅನುಗುಣವಾಗಿ ಸಾಂಕೇತಿಕ ಬಹುಮಾನ ವಿತರಣಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಎಸ್.ಎನ್.ಪ್ರಭು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆರವಟ್ಟೆಯ ವಿಶ್ರಾಂತ ಬ್ಯಾಂಕ್ ಅಧಿಕಾರಿ ವಿಜಯಾನಂದ ಗೋಳಿ ಹಾಗೂ ಚಿತ್ರಿಗಿಯ ನಾಮಾಂಕಿತ ಉದ್ಯಮಿ ಕೆನರಾ ಎಜುಕೇಶನ್ ಸೊಸೈಟಿಯ ನೂತನ ಉಪಾಧ್ಯಕ್ಷರಾಗಿರುವ ಮೋಹನ್ ಶಾನಭಾಗ ಭಾಗವಹಿಸಿದರು. ಅತಿಥಿಗಳಾಗಿ ಕೆ.ಇ.ಸೊಸೈಟಿಯ ನಿರ್ದೇಶಕ ಕೃಷ್ಣದಾಸ ಪೈ, ಪಾಲಕ ಪ್ರತಿನಿಧಿಗಳಾಗಿ ಬಾಡ ಗ್ರಾಮ ಪಂಚಾಯತ ಸದಸ್ಯೆ ಲಕ್ಷ್ಮಿ ಪಟಗಾರ, ಹೊಲನಗದ್ದೆ ಗ್ರಾಮ ಪಂಚಾಯತ್ ಸದಸ್ಯೆ ದೀಪಾ ಹಿಣಿ ಹಾಗೂ ಮಾಸೂರು ಶಿಕ್ಷಕ ಮಹಾಬಲೇಶ್ವರ ಪಟಗಾರ, ಉಷಾ ಭಟ್ ಪಾಲ್ಗೊಂಡರು.
ಸಭಾ ಕಾರ್ಯಕ್ರಮವು ವಿದ್ಯಾರ್ಥಿಗಳ ಸುಮಧುರ ಪ್ರಾರ್ಥನೆ, ಗಣಿತ ಶಿಕ್ಷಕ ಅನಿಲ ರೊಡ್ರಗೀಸರ ಸ್ವಾಗತ ನುಡಿ, ಮುಖ್ಯಗುರು ಪಾಂಡುರಂಗ ವಾಗ್ರೇಕರರ ಕಿರುವರದಿ ಹಾಗೂ ಪ್ರಸ್ತಾವನೆಯೊಂದಿಗೆ ಪ್ರಾರಂಭಗೊಂಡಿತು.ದತ್ತಿನಿಧಿಯನ್ನು ಇಟ್ಟ ಸರ್ವ ದಾನಿಗಳನ್ನು ನೆನೆಯುತ್ತಾ, ಬಹುಮಾನ ವಿತರಣಾ ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕ ಕಿರಣ ಪ್ರಭು, ಕನ್ನಡ ಶಿಕ್ಷಕ ಸುರೇಶ, ಸಮಾಜ ವಿಜ್ಞಾನ ಶಿಕ್ಷಕ ಪ್ರದೀಪ ನಾಯ್ಕ ನೆರವೇರಿಸಿದರು. ಪರೀಕ್ಷಾ ಒತ್ತಡದ ಮಧ್ಯೆಯೂ ಮಾತೃ ಸಂಸ್ಥೆಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೂರ್ವ ವಿದ್ಯಾರ್ಥಿಗಳು, ಸಭೆಗೆ ಮೆರಗನ್ನು ನೀಡಿದರು.
ಶಾಲೆಯ ವಿಕಲಚೇತನ ವಿದ್ಯಾರ್ಥಿ, ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ವಿಘ್ನೇಶ ಲೋಕೇಶ್ವರ ನಾಯ್ಕ ಈತನನ್ನು ವಿದ್ಯಾ ಸಂಸ್ಥೆಯ ವತಿಯಿಂದ ಗೌರವಿಸಿ, ಪ್ರೋತ್ಸಾಹಿ ಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.
ವೇದಿಕೆಯಲ್ಲಿ ಉಪಸ್ಥಿತ ಸರ್ವ ಗಣ್ಯರ ಹಿತೋಪದೇಶದೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮಕ್ಕೆ, ಸಂಸ್ಕೃತ ಪ್ರಾಧ್ಯಾಪಕ ಭರತ ಭಟ್ ಅಭಿವಂದಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ವಿಷ್ಣುಭಟ್ಟರ ನಿರೂಪಣೆಯಲ್ಲಿ ಕಾರ್ಯಕ್ರಮ ಸೊಗಸಾಗಿ ಮೂಡಿ ಬಂತು. ಕಾರ್ಯಕ್ರಮ ಪ್ರಾರಂಭದ ಉಪಹಾರ ವ್ಯವಸ್ಥೆಯನ್ನು ಶಾಲೆಯ ಹಳೆ ವಿದ್ಯಾರ್ಥಿ ಮುಕುಂದ ಶಾನುಭಾಗ ಹೆಗಡೆಕರ ತನ್ನ ಮಾತೋಶ್ರೀ ವೈ.ವಾ. ಗಾಯತ್ರಿ ಹೆಗಡೆಕರವರ ಸಂಸ್ಮರಣೆಯಲ್ಲಿ ನೀಡಿದರು. ಮಧ್ಯಾನ್ಹದ ಔತಣಕೂಟವನ್ನು ಮುಖ್ಯಾಧ್ಯಾಪಕ ಪಾಂಡುರಂಗ ವಾಗ್ರೇಕರ್ ಪ್ರಾಯೋಜಿಸಿದರು.
ಆಸನ ವ್ಯವಸ್ಥೆ, ಊಟೋಪಚಾರ ವ್ಯವಸ್ಥೆ ಹಾಗೂ ಕಾರ್ಯಕ್ರಮದ ಹಿನ್ನೆಲೆ ತಯಾರಿಯನ್ನು ಸುರೇಶ ಪೈ, ಪ್ರಶಾಂತ್ ಗಾವಡಿ, ಚಂದ್ರಕಲಾ ಆಚಾರ್ಯ, ಅನ್ನಪೂರ್ಣ ಕೆ ಎಸ್., ಪವಿತ್ರ ಭಂಡಾರಿ, ನಾಗರತ್ನ ಭಂಡಾರಿ, ಅಂಕಿತಾ ನಾಯ್ಕ, ನಾಗರತ್ನ ನಾಯ್ಕ ಹಾಗೂ ಸರ್ವ ಸಿಬ್ಬಂದಿ ವರ್ಗದವರು ನೆರವೇರಿಸಿಕೊಟ್ಟರು.