ಶಿರಸಿ: ನಾಡಿನ ಹೆಸರಾಂತ ರಂಗಕರ್ಮಿ, ನಿರ್ದೇಶಕ ಡಾ.ಶ್ರೀಪಾದ ಭಟ್ಟ ಅವರನ್ನು ಪ್ರಸಕ್ತ ವರ್ಷದ ಅಭಿನಯ ಭಾರತಿ ರಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶ್ರೀಪಾದ ಭಟ್ಟ ಅವರು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ನಂತರ ಸ್ವಯಂ ನಿವೃತ್ತಿ ಪಡೆದು ಪೂರ್ಣಾವಧಿ ರಂಗಭೂಮಿಯ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿ ಇರಿಸಿದ್ದಾರೆ. ತಂದೆಯವರಿಂದ ಯಕ್ಷಗಾನ ಕಲೆಯ ವಿವಿಧ ಆಯಾಮಗಳನ್ನು ಬಳುವಳಿಯಾಗಿ ಪಡೆದು, ರಂಗ ಚಿಂತನೆಯನ್ನು ಸಾಹಿತ್ಯಕ ಮೌಲ್ಯಗಳೊಂದಿಗೆ ಸಮುದಾಯ, ಜನಪದ, ರಂಗಭೂಮಿ, ಮಕ್ಕಳ ರಂಗಭೂಮಿ, ವಿಜ್ಞಾನ ಮತ್ತು ಕಲೆಯ ಸಾಕ್ಷರತಾ ಚಳುವಳಿಗಾಗಿ ಅನ್ವಯಿಸುವ ಮಾರ್ಗಗಳನ್ನು ಹುಡುಕುತ್ತ ಭಾರತೀಯ ರಂಗಭೂಮಿಯಲ್ಲಿ ಮನೆಮಾತಾಗಿದ್ದಾರೆ.
ರಂಗ ಭೂಮಿ ವ್ಯಾಕರಣವನ್ನು ನಾಡಿನಾದ್ಯಂತ
ಪರಿಚಯಿಸುತ್ತಿರುವ ಇವರಿಂದ ಜನಪದ ರಂಗಭೂಮಿ, ಬಹುಭೂಮಿಕೆ, ಉತ್ತರ ಕನ್ನಡ ಯಕ್ಷಗಾನ, ನಟನೆಕೈಪಿಡಿ ಕೃತಿಗಳು ಬಂದಿವೆ. ಇದೀಗ ಘೋಷಣೆಯಾಗಿರುವ ಅಭಿನಯ
ಭಾರತಿ ರಂಗ ಪ್ರಶಸ್ತಿಯನ್ನು ಮಾರ್ಚ್ 27ರಂದು ಧಾರವಾಡ ರಂಗಾಯಣದ ಸಹಯೋಗದೊಂದಿಗೆ ಸಂಸ್ಕೃತಿ ಸಮುಚ್ಚಯ
ಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಡಾ.ಭಟ್ಟ, ಶಿಕ್ಷಣದಲ್ಲಿ ರಂಗಭೂಮಿ ಕುರಿತು ಚಿಣ್ಣರ ಮೇಳ ಕಾರ್ಯಾಗಾರಗಳನ್ನು ನಡೆಯಿಸಿ ರಾಜ್ಯಾದ್ಯಂತ ರಂಗಭೂಮಿಗೆ ನವ ಮನ್ವಂತರ ದೀಕ್ಷೆ ನೀಡಿದ್ದಾರೆ. ಮಹಾತ್ಮ ಗಾಂಧಿ 150ನೇ ಜಯಂತಿ ಶುಭ ಸಂದರ್ಭದಲ್ಲಿ ಇವರ ಸಮರ್ಥ ನಿರ್ದೇಶನದಲ್ಲಿ ‘ಪಾಪು – ಬಾಪು’ ನಾಟಕದ 2000ಕ್ಕೂ ಮಿಕ್ಕಿ ಪ್ರದರ್ಶನಗಳು ನಾಡಿನೆಲ್ಲೆಡೆ ಪ್ರಯೋಗಗೊಂಡು ರಂಗಭೂಮಿಯಲ್ಲಿ ನೂತನ ದಾಖಲೆ ನಿರ್ಮಿಸಿದೆ. ಇವರ ಅಧ್ಯಯನಶೀಲತೆಯ ಕುರುಹಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳು ರಂಗ ಡಿಪ್ಲೊಮಾ ತರಬೇತಿಗಾಗಿ ಪಠ್ಯಕ್ರಮ ರೂಪಿಸುವ ವಿಶೇಷ ಜವಾಬ್ದಾರಿಯನ್ನು ಶ್ರೀಪಾದ ಭಟ್ಟರಿಗೆ ವಹಿಸಿದೆ.