ಕುಮಟಾ; ಕಾಡಿನ ಮಕ್ಕಳ ಆಚಾರ ವಿಚಾರ ಉಡುಗೆ ತೊಡುಗೆ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಾಲಕ್ಕಿಗಳು ತಮ್ಮ ಸಮುದಾಯದ ಗುರು ಪರಂಪರೆಯ ಹರೀಟಾ ಸೀಮೆಯ ಗುರುವಂದನ ಕಾರ್ಯಕ್ರಮ ಶಿಳ್ಳೆಯ ಸೀಮೆ ಗುರು ಗೌಡರ ಮನೆಯ ಅಂಗಳದಲ್ಲಿ ನಡೆಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಕಾಳಿ ನದಿಯಿಂದ ಹೊನ್ನಾವರದ ಶರಾವತಿ ನದಿ ಮಧ್ಯದಲ್ಲಿ ಚಂದಾವರ ಸೀಮೆ, ಹರೀಟಾ ಸೀಮೆ, ನುಶಿಕೋಟೆ ಸೀಮೆ, ಗೋಕರ್ಣ ಸೀಮೆ, ಕುಂಬಾರಗದ್ದೆ ಸೀಮೆ, ಅಂಕೋಲಾ ಸೀಮೆ, ಕಡವಾಡ ಸೀಮೆ ಹೀಗೆ ಏಳು ಸೀಮೆಗಳಲ್ಲಿ* ಹಾಲಕ್ಕಿ ಬುಡಕಟ್ಟು ಸಮುದಾಯ ತಮ್ಮ ವಸತಿ ಪ್ರದೇಶಗಳನ್ನು ಹೊಂದಿದೆ. ಸೀಮೆ ಎಂಬ ಒಳಾಡಳಿತ ವ್ಯವಸ್ಥೆಯಲ್ಲಿ ಗುರು ಗೌಡ, ಅರಸು ಗೌಡ, ಸೀಮೆ ಕೋಲಕಾರ, ಸೀಮೆ ಬುದ್ಧವಂತ, ಜನ್ಮನೆ ಗೌಡ ಎಂಬ ಮುಖಂಡರುಗಳು ಊರಿನ ವ್ಯಾಜ್ಯ, ಕಟ್ಟುಪಾಡುಗಳನ್ನು ನಿಯಂತ್ರಿಸಿ ಹಾಲಕ್ಕಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗುವುದು ಈಗಲೂ ಕೂಡ ಚಾಲ್ತಿಯಲ್ಲಿದೆ. ಸುಗ್ಗಿ ಯಂತಹ ಸಂಪ್ರದಾಯಕ ಕಲಾಪ್ರದರ್ಶನವನ್ನು ಊರಗೌಡ ಕೋಲಕಾರ ಬುದ್ಧಿವಂತರ ಮಾರ್ಗದರ್ಶನದಲ್ಲಿ ಎಂಟು ದಿನಗಳ ಕಾಲ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವ ಜನಾಂಗ ಎಂದರೆ ಹಾಲಕ್ಕಿ ಸಮುದಾಯ ಮಾತ್ರ. ಇಂತಹ ಸಮುದಾಯದಲ್ಲಿ ಗುರುಪರಂಪರೆ ಇದ್ದು ಆಧುನಿಕ ಕಾಲಘಟ್ಟದಲ್ಲಿ ಮುನ್ನೆಲೆಗೆ ಕಾಣದೆ* ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿ ನಡೆದುಕೊಂಡು ಬರುತ್ತಿದೆ. ಇಂತಹ ಒಂದು ಅಪರೂಪದ ಹಾಲಕ್ಕಿಗಳ ಹರೀಟಾ ಸೀಮೆ ವ್ಯಾಪ್ತಿಯ ಗುರುವಂದನಾ ಕಾರ್ಯಕ್ರಮ ಶಿಳ್ಳೆ ಯಲ್ಲಿ ನಡೆಯಿತು.
ಗುರು ಗೌಡ ರಾದ ಪಕೀರ ಗೌಡ ಅವರ ಪಾದ ತೊಳೆದು ಗುರು ಪೀಠದಲ್ಲಿ ಕುಳ್ಳಿರಿಸಿ ಕಾಡಿನಲ್ಲಿ ಬೆಳೆಯುವ ಸಂಪಿಗೆ ಹೂವಿನ ಮಾಲೆ ಹಾಕಿ ಗುರುಗಳಿಗೆ ಶಿಳ್ಳೆ, ಮಣಕೋಣ, ಬೆಳ್ಳೆ, ಕುಡ್ಲೆ, ಶೇಡಿಕಟ್ಟು, ದುಂಡಕುಳಿ, ಉಪ್ಪಿನ ಪಟ್ಟಣ, ಶಿರಗುಂಜಿ, ಮಲವಳ್ಳಿ, ಕಬ್ಬರಗಿ ಊರ ಗೌಡರು ಹಣ್ಣು ಕಾಯಿ ಕಾಣಿಕೆಯೊಂದಿಗೆ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ದೊಂದಿಗೆ ತೀರ್ಥ ಮತ್ತು ಮಂತ್ರಾಕ್ಷತೆಯನ್ನು ಪಡೆದುಕೊಂಡರು.
ಗುರು ಗೌಡರ ಸಹಾಯಕರಾದ ಅರಸು ಗೌಡರಾದ ಮಾದೇವ ಗೌಡ ಮಣಕೋಣ, ಪ್ರಧಾನ ಗೌಡ ರಾದ ಶಿವು ಸುಗ್ಗಿ ಗೌಡ ಬೆಳ್ಳೆ, ಜನ್ಮನಿ ಗೌಡ ರಾದ ರವಿ ಗೋಯ್ದು ಗೌಡ ಕುಡ್ಲೆ, ಪಟಗಾರ ಗೌಡ ನಾಗರಾಜ ಬಾಗ್ಲು ಗೌಡ ಶೇಡಿಕಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು ಅವರನ್ನು ಕೂಡ ಸಂಪಿಗೆ ಮಾಲೆ ಗುರು ಕಾಣಿಕೆಯನ್ನು ನೀಡಿ ಭಕ್ತಿಭಾವ ಮೆರೆದರು. ಗುರು ಗೌಡರು ಸಾಂಪ್ರದಾಯಕ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಹರೀಟಾ ಸೀಮಾ ವ್ಯಾಪ್ತಿಯ 12 ಹಳ್ಳಿ ಊರ ಗೌಡಕಿಯ ಗೌಡ, ಬುಧವಂತ ಕೋಲಕಾರ ಸೇರಿದಂತೆ ನೂರಾರು ಗ್ರಾಮಸ್ಥರು ಗುರುಗಳ ಆಶೀರ್ವಾದ ಪಡೆದುಕೊಂಡರು.
ಸಂಪ್ರದಾಯಬದ್ಧ ಕಾರ್ಯಕ್ರಮವನ್ನು ಹಿರಿಯರ ಮಾರ್ಗದರ್ಶನದಲ್ಲಿ ಕೃಷ್ಣ ಗೌಡ ಬೆಳ್ಳೆ, ಮಾದೇವ ಗೌಡ ಶಿಳ್ಳೆ ನಡೆಸಿಕೊಟ್ಟರು. ಶಿಳ್ಳೆಯ ಬೊಂಬೆ ಲಿಂಗೇಶ್ವರ ಯುವಕ ಸಂಘದ ಸದಸ್ಯರು ಸಹಕರಿಸಿದರು. ಗುರುವಂದನ ಕಾರ್ಯಕ್ರಮದ ಬಳಿಕ ಪ್ರಸಾದ ಭೋಜನ ನಡೆಯಿತು. ತಾಂಬೂಲ ಸೇವನೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.