ಹೊನ್ನಾವರ : ತಾಲೂಕಿನ ಕಡ್ಲೆಯ ರಂಗಭೂಮಿಕಾದಲ್ಲಿ ಚಿಂತನ ರಂಗ ಅಧ್ಯಯನ  ಕೇಂದ್ರದಿಂದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಠ್ಠಲ ಭಂಡಾರಿ ನೆನಪಿನಲ್ಲಿ ಆಯೋಜಿಸಿದ ಭಿನ್ನ ಭಿನ್ನ ರಂಗಭೂಮಿ ಹಿನ್ನೆಲೆಯ ಕಲಾವಿದರ ರಂಗಾನುಭವ ಕಥನ ಹಂಚಿಕೊಳ್ಳುವ ಕಾರ್ಯಕ್ರಮ ಇದಾಗಿತ್ತು. ಆರಂಭದಲ್ಲಿ ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ಮಾತನಾಡಿ ವಿಠ್ಠಲ ಭಂಡಾರಿಯವರ ನೆನಪಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಸುಯೋಗ ಎನ್ನುತ್ತ ನಾಡು-ನುಡಿಗೆ ಯಕ್ಷಗಾನದ ಕೊಡುಗೆ, ಹಿನ್ನೆಲೆ, ಕಲಾವಿದರ ಬವಣೆಯ ಜೊತೆಗೆ ತಮ್ಮ ಅನುಭವ ಕಥನ ಹೇಳಿಕೊಂಡರು. ರಂಗಭೂಮಿ ಎನ್ನುವುದು ದಿನವೂ ಆಚರಿಸಲ್ಪಡುವ ಕ್ಷೇತ್ರ, ಆದರೂ ಇಂತದ್ದೊಂದು ದಿನ ಎಲ್ಲರೂ ಸೇರಿ ಈ ದಿನವನ್ನು ಹಬ್ಬವಾಗಿಸಿ ಆಚರಿಸುತ್ತಿದ್ದೀರಿ ಎಂದರು. ಹಿರಿಯ ರಂಗ ಕಲಾವಿದ ಅನಂತ ನಾಯ್ಕ ಮಾತನಾಡಿ ದೀರ್ಘ ಕಾಲದ ರಂಗದ ಒಡನಾಟವೇ ಬದುಕಿನ ಸಾರ್ಥಕ್ಯ. ಈ ಹಾದಿಗೆ ತಂದ ನಿರ್ದೇಶಕರು, ಕಲಾವಿದರನ್ನೆಲ್ಲ ನೆನೆಯುತ್ತೇನೆ ಎಂದರು. ಕಲಾವಿದ ಎಂ.ಎನ್.ನಾಯ್ಕ ಮಾತನಾಡಿ ನಮ್ಮ ಜಿಲ್ಲೆಯ ನಾಟಕಗಳಲ್ಲಿ ಅಭಿನಯಿಸಿದ ಅನುಭವಗಳಿಂದ ಆರಂಭಗೊಂಡು ಕಂಪನಿ ನಾಟಕಗಳ ವರೆಗಿನ ತಮ್ಮ ಅನುಭವ ಕಥನ ಹೇಳಿಕೊಂಡರು. 

RELATED ARTICLES  ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ

ಇದೇ ಸಂದರ್ಭದಲ್ಲಿ ಡಾ.ಡಿ.ಎಸ್.ದೊಡ್ಮನಿಯವರ  ‘ಯಕ್ಷಗಾನ ಕ್ಷೇತ್ರಕ್ಕೆ ಸತ್ಯ ಹೆಗಡೆಯವರ ಕೊಡುಗೆ’ ಎಂಬ ಕಿರು ಸಂಶೋಧನಾ ಪ್ರಬಂಧ ಪುಸ್ತಕ ಬಿಡುಗಡೆಗೊಂಡಿತು. ಲೇಖಕ ಡಿ.ಎಸ್.ದೊಡ್ಮನಿ ನಮ್ಮ ನೆಲದ ಭಿನ್ನ ಭಿನ್ನ ರಂಗ ಪ್ರಕಾರಗಳನ್ನು ನೋಡಿದ‌ ನನಗೆ ಇಲ್ಲಿಗೆ ಬಂದು ನೆಲೆಸಿದ ಮೇಲೆ ಕರಾವಳಿಯ ಯಕ್ಷಗಾನ ಹೆಚ್ಚು ಸೆಳೆಯಿತು ಮತ್ತು ಅದೇ ಸತ್ಯ ಹೆಗಡೆಯವರ ಮೇಲೆ ಪುಸ್ತಕ ಮಾಡಲು ಸಾಧ್ಯವಾಯಿತು ಎಂದರು.

ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ ಭಟ್ ಮಾತನಾಡುತ್ತ ಸಾಂಸ್ಕೃತಿಕವಾಗಿ, ಸಾಮುದಾಯಿಕವಾಗಿ ನಾವೆಲ್ಲ ಸಕ್ರಿಯರಾಗಿ ತೊಡಗಲು ನಮಗೆ ತಿಳಿಯದೇ ಇರುವ ಹಾಗೆ ಏನೂ ಶ್ರಮ ನೀಡದೆ ಎಲ್ಲವನ್ನು ಸಂಘಟಿಸಿ ನಿಭಾಯಿಸುತ್ತಿದ್ದ ವಿಠ್ಠಲ ಭಂಡಾರಿಯವರನ್ನ ಇಂದು ನೆನೆಸಿಕೊಳ್ಳಬೇಕು ಎನ್ನುತ್ತ ದೊಡ್ಡ ಮಟ್ಟದ ಪ್ರಚಾರದಿಂದ ದೂರ ಉಳಿದ ಆದರೆ ಅಪಾರವಾದ ಯಕ್ಷಸೇವೆ ಮಾಡಿದ ಸತ್ಯ ಹೆಗಡೆಯವರ ಕುರಿತು ಪುಸ್ತಕ ಮಾಡಿದ ದೊಡ್ಮನಿಯವರ ಪುಸ್ತಕದ ಕುರಿತು ಅವರ ಆಸಕ್ತಿ, ಪರಿಶ್ರಮದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.

RELATED ARTICLES  ಕುಮಟಾ ತಹಶಿಲ್ದಾರರಾಗಿ ಸತೀಶ ಗೌಡ : ಎಸ್.ಎಸ್ ನಾಯ್ಕಲಮಠ ವರ್ಗಾವಣೆ.

ಅಮೃತಾ ಬೆಂಕಟವಳ್ಳಿ ರಂಗಗೀತೆಗಳನ್ನು ಹಾಡಿದರು. ವಿನಾಯಕ ಎಸ್.ಎಮ್ ಕಥಾಭಿನಯ ಮಾಡಿದರು.‌ ಎಮ್ ಎನ್ ನಾಯ್ಕ ರಂಗ ಸಂಭಾಷಣೆಗಳಿಂದ ರಂಜಿಸಿದರು. ಇನಿ ನೃತ್ಯಪ್ರದರ್ಶನ ನೀಡಿದರು. ದಾಮೋದರ ನಾಯ್ಕ ಸ್ವಾಗಿಸಿದರು. ಶ್ರೀನಿವಾಸ ನಾಯ್ಕ ವಿಶ್ವರಂಗಭೂಮಿ ಸಂದೇಶ ಓದಿದರು. ಮಾಸ್ತಿ ಗೌಡ ವಂದಿಸಿದರು. ವಿದ್ಯಾಧರ ಕಡತೋಕ ಕಾರ್ಯಕ್ರಮ ನಿರ್ವಹಿಸಿದರು.