ಕುಮಟಾ: ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ಸೇವೆ ಹಾಗೂ ವಿವಿದ ಸಮಾಜಮುಖಿ ಕಾರ್ಯಗಳ ಮೂಲಕ ಮೆಚ್ಚುಗೆ ಪಡೆದಿರುವ ಪಟ್ಟಣದ ಬಗ್ಗೋಣ ರಸ್ತೆಯ ವಿದ್ಯಾಗಿರಿಯಲ್ಲಿರುವ ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ವಿಸ್ತೃತ ಕಟ್ಟಡ ಮತ್ತು ಆಧುನಿಕ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಇದೇ ಏ.10 ರಂದು ಮಧ್ಯಾಹ್ನ 4.30 ಘಂಟೆಗೆ ನಡೆಯಲಿದೆ. ಈ ಬಗ್ಗೆ ಆಸ್ಪತ್ರೆ ಆವಾರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರು ಮಾಹಿತಿ ನೀಡಿದರು.
ಲಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ನ ಅಧ್ಯಕ್ಷರಾದ ದೇವಿದಾಸ ಶೇಟ್ ಸರ್ವರನ್ನೂ ಸ್ವಾಗತಿಸುತ್ತಾ ಮಾತನ್ನಾಡಿ ಕಳೆದ 45 ವರ್ಷಗಳಿಂದ ಬಡವವರಿಗೆ ಜಾತಿ ಬೇಧ ಭಾವವಿಲ್ಲದೆ ಜಿಲ್ಲೆಯ ಜನತೆಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ ದಾನಿಗಳ ಸಹಕಾರದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಕಟ್ಟಡವನ್ನು ಕೂಡ ವಿಸ್ತರಿಸಿದ್ದೇವೆ. ವಿಸ್ತತ ಕಟ್ಟಡ ಮತ್ತು ಆಧುನಿಕ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಏ.10ರ ಸಂಜೆ
4.30 ಗಂಟೆಗೆ ನಡೆಯಲಿದೆ. ಗಣ್ಯರ ಮತ್ತು ದಾನಿಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಮಾತನಾಡಿ, ಆಸ್ಪತ್ರೆಯ ವಿಸ್ತ್ರತ ಕಟ್ಟಡ ಮತ್ತು ಆಧುನಿಕ ಸೌಲಭ್ಯಗಳ ಉದ್ಘಾಟನೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ ನೆರವೇರಿಸಲಿದ್ದಾರೆ. ಲಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ದೇವಿದಾಸ ಶೇಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ನೇತ್ರ ತಜ್ಞ ವೈದ್ಯರ ಕೊಠಡಿಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. ಹೊರರೋಗಿಗಳ ವಿಭಾಗದ ಕೊಠಡಿಯನ್ನು ಮಾಜಿ ಸಚಿವ ಮತ್ತು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಲಿದ್ದಾರೆ. ಸ್ಪೆಷಲ್ ರೂಮ್‌ಗಳನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಮುಂಬೈ ಉದ್ಯಮಿ ದುರ್ಗೇಶ ಚಂದಾವರಕರ್ ಉದ್ಘಾಟಿಸಲಿದ್ದು, ಆಧುನಿಕ ಯಂತ್ರೋಪಕರಣಗಳ ಉದ್ಘಾಟನೆಯನ್ನು ಎಂಜೆಎಫ್ ಲಯನ್ ಶ್ರೀಕಾಂತ ಮೋರೆ ಉದ್ಘಾಟಿಸಲಿದ್ದಾರೆ. ಲಿಫ್ಟ್ ಅನ್ನು ಮಾಜಿ ಶಾಸಕಿ ಶಾರದಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಗುತ್ತದೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಟ್ರಸ್ಟನ ಖಜಾಂಚಿ ಎಚ್.ಎನ್.ನಾಯ್ಕ ಮಾತನಾಡಿ, ನಮ್ಮ ಆಸ್ಪತ್ರೆಯಿಂದ 2.5 ಲಕ್ಷ ಜನರಿಗೆ ವೈದ್ಯಕೀಯ ಸೇವೆ ನೀಡಿದ್ದೇವೆ. 18 ಸಾವಿರ ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಈ ಮೂಲಕ ನಮ್ಮ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಬೆಳೆಯುತ್ತ ಸಾಗಿದಾಗ ಆಸ್ಪತ್ರೆಯನ್ನು ವಿಸ್ತರಿಸುವ ಜೊತೆಗೆ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಐದು ವರ್ಷಗಳ ಹಿಂದೆ ಲೀಜ್ ಮೇಲೆ ಪಡೆದಿದ್ದ ಆಸ್ಪತ್ರೆಯ ಜಾಗವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್ .ವಿ.ದೇಶಪಾಂಡೆ ಸಹಕಾರದಿಂದ ಆಸ್ಪತ್ರೆಯ ಹೆಸರಿಗೆ ವರ್ಗಾಯಿಸಿಕೊಂಡಿದ್ದೇವೆ. ಅಲ್ಲಿಂದ ಆಸ್ಪತ್ರೆಯನ್ನು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಿದೆವು. ಅನೇಕರು ನಮ್ಮ ಆಸ್ಪತ್ರೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದರ ಫಲವಾಗಿ ಇವತ್ತು ನವೀಕೃತ ಆಸ್ಪತ್ರೆಯ ಕಟ್ಟಡ ತಲೆ ಎತ್ತಿ ನಿಂತಿದೆ. ಸುಮಾರು 1 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿದ್ದೇವೆ. 3 ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಬಹುದಾದ ಆಫರೇಶನ್ ಥಿಯೇಟರ್ ವ್ಯವಸ್ಥೆ ಇದೆ. ಕ್ವಾಲಿಫೈಡ್ ನರ್ಸಗಳು, ನುರಿತ ಟೆಕ್ನಿಷಿಯನ್‌ಗಳ ಜೊತೆಗೆ ಉತ್ತಮ ಸಿಬ್ಬಂದಿಗಳು ಇರುವುದರಿಂದಲೇ ಈ ಆಸ್ಪತ್ರೆ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಗಳಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಎಸ್. ವೆರ್ಣೇಕರ, ಟ್ರಸ್ಟಿಗಳಾದ ವಿ.ಐ.ಹೆಗಡೆ, ಮದನ ನಾಯಕ, ರಘುನಾಥ ದಿವಾಕರ, ಲಯನ್ಸ್ ಕ್ಲಬ್ ಅಧ್ಯಕ್ಷ ಅನಂತ ಕಾಮತ, ನೇತ್ರ ತಜ್ಞರಾದ ಡಾ.ಮಲ್ಲಿಕಾರ್ಜುನ, ಡಾ.ಮೇಘಾ ದಿವಾಕರ ಇದ್ದರು.