ಕುಮಟಾ: ಲಯನ್ಸ್ ಕ್ಲಬ್ ಕುಮಟಾ, ಲಯನ್ಸ್
ಹ್ಯುಮಾನಿಟೇರಿಯನ್ ಸರ್ವಿಸ್ ಟ್ರಸ್ಟ್‌ನ ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯ ವಿಸ್ಕೃತ ಕಟ್ಟಡ ಮತ್ತು ಆಧುನಿಕ ಸೌಲಭ್ಯಗಳನ್ನು ಉದ್ಘಾಟನಾ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾತಂತ್ರ್ಯ ಲಭಿಸಿ 15
ವರ್ಷಗಳಾದರೂ ಮೂಲಭೂತ ಸಮಸ್ಯೆಯನ್ನು
ಕಣ್ಣಾರೆ ಕಾಣುತ್ತಿದ್ದೇವೆ. ಈ ಮಧ್ಯೆ ಲಯನ್ಸ್ ಕ್ಲಬ್ ಜನಸಾಮಾನ್ಯರಿಗೆ ಸಮಾಜದಲ್ಲಿ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರ ಮಾಡಬೇಕಾದ ಕೆಲಸವನ್ನು ಲಯನ್ಸ್ ಕ್ಲಬ್ ಮಾಡುತ್ತಿರುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ನಾಗರಿಕ ಸಮಾಜಕ್ಕೆ ಅತ್ಯವಶ್ಯವಾಗಿರುವ ಸೌಕರ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ನಾಗರಿಕ ಸಮಾಜವನ್ನು ಉನ್ನತೀಕರಿಸುತ್ತಿದೆ ಎಂದರು.
ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳು ಹೆಚ್ಚೆಚ್ಚು ಸ್ಥಾಪನೆಯಾಗುವುದರ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕಿದೆ ಎಂದ ಅವರು, ರಾಜ್ಯದಲ್ಲಿ 3 ಲಕ್ಷ ಜನರು ದೃಷ್ಟಿ ಹೀನರಿದ್ದು, ಅದರಲ್ಲಿ 1.20 ಲಕ್ಷ ಜನರು 70 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ದೃಷ್ಟಿಹೀನರನ್ನು ಗುರಿಯನ್ನಾಗಿಸಿ, ಹೊಸ ಯೋಜನೆಯನ್ನು ರೂಪಿಸುವ ಬಗ್ಗೆ ಆರೋಗ್ಯ
ಇಲಾಖೆಯ ಜತೆ ಚರ್ಚಿಸುತ್ತೇನೆ ಎಂದರು.
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಮೇರೆಗೆ ಕೆಲಸ ಮಾಡುವ ಅನಿವಾರ್ಯತೆಯಿದೆ. ಲಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆ ಕಳೆದ 40 ವರ್ಷಗಳಿಂದ ಬಡವರಿಗೆ ಉಚಿತ ನೇತ್ರ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗೆ ಪಕ್ಷಾತೀತವಾಗಿ ಉತ್ತರ ಕಂಡುಹಿಡಿಯಬೇಕು. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ, ಚುನಾವಣೆಗೆ ಮಾತ್ರ ರಾಜಕೀಯ ಸೀಮಿತವಾಗಿಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಲಯನ್ಸ್
ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯು ವಿಸ್ತತ ಕಟ್ಟಡ ನಿರ್ಮಿಸಿ, ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ನೀಡಲು ಮುಂದಾಗಿರುವುದಕ್ಕೆ ಕ್ಷೇತ್ರದ ಶಾಸಕನಾಗಿ ಅಭಿನಂದೆ ಸಲ್ಲಿಸುತ್ತೇನೆ. ಬಡಜನರಿಗೆ ಉಚಿತವಾಗಿ ಕಣ್ಣಿನ ಚಿಕಿತ್ಸೆ ನೀಡಿ, ತನ್ನ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಅರ್ಪಿಸಿರುವುದನ್ನು ನೋಡುತ್ತಿದ್ದೇವೆ ಎಂದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಿಸಲಾಯಿತು. ಲಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ಚೇರಮೆನ್ ಲಯನ್ ದೇವಿದಾಸ ಶೇಟ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ಲಯನ್ ಕೆ. ವಂಶೀಧರ ಬಾಬು, ಡಿಸ್ಟಿಕ್ ಗರ್ವನರ್ ಎಂಜೆಎಫ್ ಲಯನ್ ಶ್ರೀಕಾಂತ ಮೋರೆ, ಪಿ.ಡಿ.ಜಿ ಎಂ.ಜೆ.ಎಫ್ ಡಾ. ರವಿ ಹೆಗಡೆ ಹೂವಿನಮನೆ, ಪಿ.ಡಿ.ಜಿ ಪಿ.ಎಂ.ಜೆ.ಎಫ್ ಗಣಪತಿ ನಾಯಕ ಗೋಕರ್ಣ, ಲಯನ್ ಡಾ. ಗಿರೀಶ ಕುಚಿನಾಡು, ಜಿಲ್ಲಾ ಆರೋಗ್ಯಾಧಿಕಾರಿ
ಡಾ. ಶರದ್ ನಾಯಕ, ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿ ಡಾ. ಸುರೇಶ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಮೂಡಲಮನೆ ನಿರೂಪಿಸಿದರು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಸಮಗ್ರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು.