ಸಿದ್ದಾಪುರ: ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಬಂಟರ ಸಂಘ, ಲಯನ್ಸ ಸಂಸ್ಥೆ, ಹಿರಿಯ ಪ್ರಾಥಮಿಕ ಶಾಲೆ, ಅಂಧರ ಶಾಲೆ, ಪ್ರೌಢಶಾಲೆ ಹೀಗೆ ಕಳೆದ 60 ವರ್ಷಗಳಿಂದ ವೃತ್ತಿಯ ಜೊತೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ, ಸುಮಾರು ಆರು ದಶಕಗಳ ಕಾಲ ಸಿದ್ದಾಪುರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ಎಂ.ಪಿ.ಶೆಟ್ಟಿ ಬುಧವಾರ ಬೆಳಗಿನ ಜಾವ ದೈವಾಧೀನರಾಗಿದ್ದಾರೆ. ಉಡುಪಿಯ ಕುಂದಾಪುರದಲ್ಲಿ ಜನಿಸಿದ್ದ ಡಾ.ಎಂ.ಪಿ.ಶೆಟ್ಟಿ ಅವರು ಕಟಪಾಡಿಯಲ್ಲಿ ಪ್ರೌಢಶಿಕ್ಷಣ, ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಮಂಗಳೂರ ಸರಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿ, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಕಾಲ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸಿದ್ದರು. ನಂತರ ಸಿದ್ದಾಪುರ ತಾಲೂಕಿಗೆ ಆಗಮಿಸಿದ ಅವರು ಸಿದ್ದಾಪುರ ತಾಲೂಕು ಕೇಂದ್ರದಿಂದ ಹತ್ತಿಪ್ಪತ್ತು ಕಿಲೋಮೀಟರ್ ಗಳ ದೂರವನ್ನು ಮಳೆ,ಚಳಿ, ಬಿಸಿಲೆನ್ನದೇ ಮೊದಲು ಸೈಕಲ್ ಏರಿ, ನಂತರ ಕಾರಿನಲ್ಲಿ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ದೋಣಿ, ತೆಪ್ಪಗಳಲ್ಲಿ ಹೋಗಿ ಡೆಲಿವರಿ ಮಾಡಿಸುತ್ತಿದ್ದರು. ರೋಗಿಗಳಲ್ಲೂ ಅಷ್ಟೇ ಬಡವ ಬಲ್ಲಿದರೆಂಬ ತಾರತಮ್ಯ ಮಾಡುತ್ತಿರಲಿಲ್ಲ.

RELATED ARTICLES  ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಸಿದ್ದಾಪುರದಲ್ಲಿ ಲಯನ್ಸ ಸಂಸ್ಥೆಯನ್ನು ಹುಟ್ಟುಹಾಕಿ ಸಂಸ್ಥಾಪಕ ಅಧ್ಯಕ್ಷರಾಗಿ, ಹತ್ತು ಹಲವು ಹುದ್ದೆಗಳನ್ನು ನಿರ್ವಹಿಸಿದ ಡಾ.ಎಂ.ಪಿ.ಶೆಟ್ಟರು ಸಂಸ್ಥೆಯ ವತಿಯಿಂದ ನಡೆಸಲಾದ ಕಣ್ಣಿನ ಉಚಿತ ತಪಾಸಣೆ, ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳ ಶಿಬಿರಾಧಿಕಾರಿಯಾಗಿ ಸಹಸ್ರಾರು ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಕಲ್ಪಿಸುವಲ್ಲಿ ಶ್ರಮಿಸಿದ್ದರು. 1973 ರಿಂದ ನೂರಾರು ಉಚಿತ ಆರೋಗ್ಯ ಶಿಬಿರಗಳನ್ನು ಲಯನ್ಸ ಸಂಸ್ಥೆಯ ಮೂಲಕ ಏರ್ಪಡಿಸಿ ಸಾವಿರಾರು ರೋಗಿಗಳಿಗೆ ಧನ್ವಂತರಿಯಾಗಿ ಕರುಣೆ ಉಣಬಡಿಸಿದ್ದರು.

RELATED ARTICLES  ನೆರೆಹಾವಳಿಯಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳ ಕಿಟ್‌ ವಿತರಣೆ.

ಈ ಹಿನ್ನೆಲೆಯಲ್ಲಿ ಶೆಟ್ಟಿ ಡಾಕ್ಟರರಿಗೆ ಲಯನ್ಸ ಅಂತಾರಾಷ್ಟ್ರೀಯ ಸಂಸ್ಥೆಯಿಂದ ‘ಜೀವಮಾನ ಸಾಧನಾ ಪ್ರಶಸ್ತಿ’ ಲಭಿಸಿತ್ತು. ಉ.ಕ.ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳದಿಂದಲೂ, ಜಿಲ್ಲಾ ಬಂಟರ ಸಂಘದಿಂದಲೂ ಅವರಿಗೆ ಗೌರವ ಸಂಮಾನ ಸಂದಿತ್ತು. ಐಎಂಎ, ಜಿ.ಎಸ್.ಬಿ.ಸಮಾಜದ ಪ್ರಮುಖರು, ಛಾಯಾ ಚಿತ್ರಕಾರರ ಸಂಘ, ಮಲೆನಾಡ ಪ್ರೌಢಶಾಲೆ ಇವುಗಳಿಂದಲೂ ಶೆಟ್ಟಿ ಡಾಕ್ಟರರನ್ನು ಗೌರವಿಸಲಾಗಿತ್ತು. 2014 ರ ಮಾರ್ಚ 13 ರಂದು ಸಿದ್ದಾಪುರದಲ್ಲಿ ಅವರಿಗೆ ಅದ್ದೂರಿಯಾಗಿ ಸಾರ್ವಜನಿಕ ಸನ್ಮಾನ ನಡೆದಿತ್ತು. “ಜ್ಯೋತಿ” ಅಭಿನಂದನಾ ಗ್ರಂಥವನ್ನೂ ಸಮರ್ಪಿಸಲಾಗಿತ್ತು.