ಮುಂಬೈ: ಇದೀಗ ಬಂಧನಕ್ಕೆ ಒಳಗಾಗಿರುವ ಕುಖ್ಯಾತ ಭೂಗತಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್, ಹಲವು ಬಿಲ್ಡರ್ಗಳಿಗೆ ಪ್ರಾಣಬೆದರಿಕೆ ಒಡ್ಡಿ ನಗದು, ಫ್ಲ್ಯಾಟ್ಗಳು ಮತ್ತು ಸಣ್ಣಪುಟ್ಟ ಬಿಲ್ಡರ್ಗಳಿಂದ ಭೂಮಿಯನ್ನೂ ತನ್ನದಾಗಿಸಿಕೊಂಡಿದ್ದಾನೆ. ಈ ರೀತಿ ಆತ 3 ವರ್ಷಗಳಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ಹಣ ಪಡೆದಿದ್ದಾನೆ. ಆತನ ಈ ಕೃತ್ಯಗಳಿಗೆ ಎನ್ಸಿಪಿಯ ಸ್ಥಳೀಯ ನಾಯಕರಿಬ್ಬರು ಸಹಕರಿಸಿರುವ ಶಂಕೆ ಇದೆ ಎಂದು ಮುಂಬೈ ಪೊಲೀಸ್ನ ಹಿರಿಯ ಇನ್ಸ್ಪೆಕ್ಟರ್ ಪ್ರದೀಪ್ ಶರ್ಮ ತಿಳಿಸಿದ್ದಾರೆ.
ಆರ್ಥಿಕ ಹಿಂಜರಿತ, ನೋಟು ರದ್ದತಿ ಸೇರಿ ಹಲವು ಕಾರಣಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಹಿವಾಟು ಕಡಿಮೆಯಾಗಿತ್ತು. ಹಣ ಕೊಡಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಬಿಲ್ಡರ್ಗಳಿಂದ ಕಸ್ಕರ್, ದುಬಾರಿ ಫ್ಲ್ಯಾಟ್ಗಳನ್ನು ಪಡೆದುಕೊಂಡಿದ್ದಾನೆ. ಇವುಗಳಲ್ಲಿ ಅನೇಕ ಫ್ಲ್ಯಾಟ್ಗಳನ್ನು ಮಾರಾಟ ಮಾಡಿದ್ದು, ಇದಕ್ಕೆ ರಾಜಕಾರಣಿಗಳು ‘ಜಾಮೀನುದಾರರ‘ರಾಗಿದ್ದಾರೆ. ಇದೇ ರಾಜಕಾರಣಗಳು ಹಣ ಸುಲಿಗೆ ದಂಧೆಗೂ ಸಹಕರಿಸಿದ್ದಾರೆ ಎಂಬ ಅನುಮಾನ ಇರುವುದಾಗಿ ಹೇಳಿದ್ದಾರೆ.
ಆಯಕಟ್ಟಿನ ಜಾಗದಲ್ಲಿ ಸಣ್ಣಪುಟ್ಟ ಬಿಲ್ಡರ್ಗಳು ವಸತಿಸಮುಚ್ಚಯ ನಿರ್ವಿುಸಲು ಮುಂದಾದಾಗ, ಅವರನ್ನು ಹೆದರಿಸಿ ಜಾಗವನ್ನೇ ಕಬಳಿಸಿದ್ದಾನೆ. ಈತನ ಬೆದರಿಕೆ ಕರೆಗಳಿಂದ ಭೀತನಾದ ಒಬ್ಬ ಬಿಲ್ಡರ್ ಊರನ್ನೇ ತೊರೆದಿದ್ದಾರೆ. ಈ ಕೃತ್ಯದಲ್ಲಿ ದೊಡ್ಡ, ದೊಡ್ಡ ಬಿಲ್ಡರ್ಗಳು ಶಾಮೀಲಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.