ಕುಮಟಾ: ಸರಕಾರಿ ಅಧಿಕಾರಿಗಳು ಎಸಿ ಕೊಠಡಿಯಲ್ಲಿ ಕುಳಿತುಕೊಂಡಿದ್ದರೆ ಗ್ರಾಮೀಣ ಭಾಗದ ಜನರ ಕಷ್ಟಗಳು ತಿಳಿಯುವುದಿಲ್ಲ, ಹಾಗಾಗಿ ಅಧಿಕಾರಿಗಳು, ಶಾಸಕರು ತಿಂಗಳಿಗೊಮ್ಮೆ ಅಧಿಕಾರಿಗಳ ನಡಿಗೆ ಹಳ್ಳಿಯ ಕಡೆ ಕಾರ್ಯಕ್ರಮ ಮಾಡಿ ಅಲ್ಲಿನ ಜನರ ಸಮಸ್ಯೆಯನ್ನು ಪರಿಹರಿಸಿಕೊಡುವ ಜೊತೆಗೆ, ಆ ಗ್ರಾಮವನ್ನು ಅಭಿವೃದ್ದಿಪಡಿಸಿಕೊಡಬೇಕು ಎನ್ನುವ ಚಿಂತನೆಯಿಂದಲೇ ಈ ಯೋಜನೆ ಜಾರಿಗೋಳಿಸಿದ್ದೇನೆ, ಈ ಯೋಜನೆಯ ಜಾರಿಯಾದ ಮೇಲೆ ಹಳ್ಳಿಯ ಜನರ ಸಂಕಷ್ಟ ಅರಿಯಲು ಸಾಧ್ಯವಾಗಿದೆ ಎಂದು ಕಂದಾಯ ಸಚಿವರಾದ ಆರ್. ಅಶೋಕ ಹೇಳಿದರು. ತಾಲೂಕಿನ ಹೊಲನಗದ್ದೆಯ ಸರ್ಕಾರಿ ಶಾಲೆಯಲ್ಲಿ ನಡೆದ ಕಂದಾಯ ಸಚಿವರ ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಗ್ರಾಮಸ್ಥರ ಹಲವು ಅಹವಾಲುಗಳನ್ನು ಆಲಿಸುವ ಮುಖೇನ ಅರ್ಜಿದಾರರ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಸಂಭಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಕಂದಾಯ ಸಚಿವರ ಗ್ರಾಮ ವಾಸ್ಥವ್ಯ ಅಂಕೋಲಾದ ಅಚವೆಯಲ್ಲಿ ಇತ್ತು. ಅಲ್ಲಿಗೂ ತೆರಳುವಾಗ ನಮ್ಮ ಕುಮಟಾ ಕ್ಷೇತ್ರದ ಜನರ ಅಹವಾಲು ಆಲಿಸಿ ಕಂದಾಯ ಸಮಸ್ಯೆಯನ್ನು ಪರಿಹರಿಸಿಕೊಂಡಬೇಕು ಎಂದು ಮನವಿ ಮಾಡಿದೆ. ನಮ್ಮ ಮನವಿಗೆ ಸ್ಪಂದಿಸಿದ ಸಚಿವರು ಹೊಲನಗದ್ದೆಯ ಗ್ರಾಮದಲ್ಲಿ ಅಹವಾಲು ಸ್ವೀಕರಿಸುವ ಕಾರ್ಯ ಮಾಡಿದ್ದಾರೆ. ಗ್ರಾಮೀಣ ಭಾಗದ ಅನೇಕ ಸಮಸ್ಯೆಯನ್ನು ತಕ್ಷಣ ಬಗೆ ಹರಿಸಿಕೊಡುವ ಶಕ್ತಿ ಕಂದಾಯ ಸಚಿವರಿಗೆ ಇದೆ, ಹಾಗಾಗಿ ಅವರನ್ನು ಈ ಗ್ರಾಮಕ್ಕೆ ಕರೆಯಿಸಿದ್ದೇನೆ, ಕಂದಾಯ ಇಲಾಖೆಗೆ ಸಂಬಂದಿಸಿದ ಬಹುತೇಕ ಸಮಸ್ಯೆಗೆ ಇಂದು ಪರಿಹಾರ ದೊರೆಯುತ್ತಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ ಜಿ.ಪಂ ಸಿಓ ಪ್ರೀಯಾಂಗ, ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ, ತಹಶಿಲ್ದಾರ್ ವಿವೇಕ ಶೇಣ್ವಿ, ತಾ.ಪಂ ಇಓ ಸಿ.ಟಿ ನಾಯ್ಕ, ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಗ್ರಾ.ಪಂ ಸದಸ್ಯರು ಸೇರಿದಂತೆ ಇತರಿದ್ದರು.